Archive for the ‘ಫ್ರೆಷ್ ಪೇಜಸ್’ category

ಎಲ್ಲ ಗದ್ದಲದ ಆಚೆಗೂ…

ನವೆಂಬರ್ 17, 2007

ಉಫೀಟ್…!
ಲೇ: ಚೇತನಾ ತೀರ್ಥಹಳ್ಳಿ
ಪ್ರ: ಇಬ್ಬನಿ ಭಾವಬಿಂದು, ೩೬೩೪, ೪ನೇ ಕ್ರಾಸ್, ಕೌಂಡಿನ್ಯ ಮೆಡಿಕಲ್ಸ್ ಸಮೀಪ, ಗಾಯತ್ರಿ ನಗರ, ಬೆಂಗಳೂರು-೨೧
ಬೆಲೆ: ೨೦ ರೂ. ಪುಟಗಳು: ೪೪

chetana_coverone5.jpg

* * *

ಚೇತನಾ ತೀರ್ಥಹಳ್ಳಿ ನನಗೆ ಪರಿಚಯವಿರುವುದು “ಪುರುಷಾಕಾರ”ವನ್ನು ಬೆಚ್ಚಿಸಬಲ್ಲ ಅವರ ಬರಹಗಳ ಮೂಲಕ. ಪುಟ್ಟ ಪುಟ್ಟ ಬರಹಗಳು ಅವು. ಕಾವ್ಯದ ಶಕ್ತಿಯೊಂದಿಗೆ ಕೆಲವೇ ಮಾತುಗಳಲ್ಲಿ ಮಾರ್ಮಿಕವಾಗಿ, ಆದರೆ ಬಲು ನಿರಾಯಾಸವಾಗಿ, ಹೇಳಬೇಕಾದ್ದನ್ನು ಹೇಳಿ ಮುಗಿಸಬಲ್ಲ ಸಹಜವಂತಿಕೆಯಿಂದ ಅವರ ಬರಹಗಳು ಗಮನ ಸೆಳೆಯುತ್ತವೆ. ಅವರು ಕವಿತೆಯನ್ನೂ ಬರೆಯುತ್ತಾರೆ ಎಂಬುದು ಗೊತ್ತಾದದ್ದೇ ಮೊನ್ನೆ.

ಅಳಲು, ಸಿಟ್ಟು ಮತ್ತು ಪ್ರತಿಭಟನೆಯನ್ನು ಹಾಹಾಗೇ ವ್ಯಕ್ತಪಡಿಸುವ ಯಾವುದೇ ಮನೆಯ ಹುಡುಗಿಯ ಹಾಗೆ ಚೇತನಾ ಅವರ ಅಭಿವ್ಯಕ್ತಿ. ಹಾಗಾಗಿಯೇ ಚೇತನಾ ಎಷ್ಟೋ ಸಲ ಗೋಳು ಮತ್ತು ಗೋಜಲುಗಳ ಕಥೆಗಳಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿದರೂ, ಅವರು ಹೇಳುತ್ತಿರುವುದು ಮಾತ್ರ ಹಲವು ಹುಡುಗಿಯರ ಕಥೆಯನ್ನು ಎಂಬುದೂ ನಿಚ್ಚಳ. ವೈಯಕ್ತಕ ಸಂಕಟಗಳ ಕತ್ತಲ ಕೋಣೆಯ ಬಾಗಿಲಿಂದಾಚೆಯೂ ನಿರುಕಿಸುವ ಧ್ಯಾನ ಅವರದು. ಅದರಿಂದ, ಒಂದಿಡೀ ಸಮುದಾಯದ ಆತ್ಮಕಥನವಾಗಲು ತವಕಿಸುವ ಮಿಂಚಿನ ಧಾರೆಗಳು ಕೂಡ ಅವರ ಬರಹಗಳಲ್ಲಿ ಗೋಚರವಾಗುತ್ತವೆ.

*

“ಹನ್ನೆರಡು ಮನೆ
ಕುಂಟೋಬಿಲ್ಲೆಯ ಹುಡುಗಿ
ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ,
ಆಟ ಸೋತಿದ್ದಾಳೆ.”

ಇಲ್ಲಿನ ಬಹುಪಾಲು ಕವಿತೆಗಳಲ್ಲಿ ಇರುವವರು ಹೀಗೆ “ಆಟ ಸೋತ” ಹುಡುಗಿಯರು. “ಬಲಗಾಲಿಟ್ಟು ಶುರುವಾಗುವ ಆಟ”ದಲ್ಲಿ ಸೋತವರು. ಇವರದೆಲ್ಲ “ನೋವುಗಳ ಬಗೆಬಗೆದು ಹೊರಗೆಳೆದು ಅಳು”ವ ಸ್ಥಿತಿ. ಹಾಗಿದ್ದೂ ಬೇರೆಯವರ ಅನುಕಂಪದ ನೋಟ ಇವರನ್ನು ಸಂತೈಸುವುದಿಲ್ಲ; ಬದಲಾಗಿ ಇನ್ನಷ್ಟು ತಲ್ಲಣಗೊಳಿಸುತ್ತದೆ. ನಿರ್ದಯಿ ಲೋಕದಲ್ಲಿ ನಗುವಾಗಿ ಅವತರಿಸುವ ಶಕ್ತಿವಂತೆಯರು ಇವರು.

“ಎಷ್ಟು ದಿನಗಳಾಗಿ ಹೋಗಿವೆ
ನನ್ನ ನೆರಳು ನೋಡಿ ನಾನು!”

ಹೆಣ್ಣೊಬ್ಬಳ “ಗೃಹಬಂಧನ” ಅವಸ್ಥೆಯನ್ನು ನಿರೂಪಿಸುವುದಕ್ಕೆ ಇದಕ್ಕಿಂತ ಬೇರೆ ಸಾಲುಗಳು ಬೇಕಿಲ್ಲವೇನೊ. ಒಂದು ನಿರೀಕ್ಷೆಯಿಂದ, ಸುಂದರ ಕನಸಿನಿಂದ ಶುರುವಾಗುವ ಬಾಳು ಯಾವ ಹಂತಕ್ಕೆ ಮುಟ್ಟಿದೆಯೆಂದರೆ, ಈಗ ಸೂರ್ಯನ ಮುಖ ನೋಡದೆ ದಿನಗಳು ಹುಟ್ಟುವುದು, ಮುಗಿದುಹೋಗುವುದು ಅಭ್ಯಾಸವೇ ಆಗಿಹೋಗಿದೆ.

ಇಂಥ ಹಲವು ಕಥನಗಳನ್ನು ಚೇತನಾ ಕವಿತೆಗಳು ನುಡಿಸುತ್ತವೆ. ಹಲವು ದಿಗ್ಭ್ರಮೆಗಳ ಮೊತ್ತವನ್ನು ಗಂಟು ಕಟ್ಟಿಕೊಂಡು ಸಾಗಿರುವ ಹುಡುಗಿಯರ ದನಿಯನ್ನು ಇವರ ಕವಿತೆಗಳ ತೀರದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.

ನನಗೆ ತುಂಬ ಇಷ್ಟವಾದ ಚೇತನಾ ಅವರ ಮತ್ತೊಂದು ಕವಿತೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಈ ಕವಿತೆಯಲ್ಲಿ ಅವರು, ಸಮಾಜದ ಪುರುಷ ಪ್ರಧಾನ ಧೋರಣೆಯನ್ನು ಅಣಕಿಸುವ ಬಗೆ ಬಲು ಸೂಕ್ಷ್ಮವಾಗಿದೆ. ಮಹಾದೇವಿ ಅಕ್ಕ ಆದದ್ದು, ಮೀರಾ ಸಂತಳೆನಿಸಿದ್ದು ನಿಜವಾಗಿಯೂ ಹೇಗೆ ಎಂಬ ಪ್ರಶ್ನೆಗಳನ್ನು ಈ ಕವಿತೆ ಉತ್ತರಿಸುತ್ತದೆ. ಅವರಿಬ್ಬರೂ ಕ್ರಮವಾಗಿ “ಕಲ್ಲು” ಚೆನ್ನಮಲ್ಲಿಕಾರ್ಜುನನನ್ನು, “ಗೊಂಬೆ” ಮಾಧವನನ್ನು ಗಂಡನೆಂದು ಬಗೆದರು. ಆದರೆ ಅವರ ಹಾಗೆಯೇ ಗಂಡನ್ನ ಬಿಟ್ಟು ಮತ್ತಾರನ್ನೋ ಗಂಡನೆಂದು ಬಗೆದ ಹೊಸ ಸಮಾಜದ ಹೆಣ್ಣುಮಗಳೊಬ್ಬಳು ಪಡೆದದ್ದು ಹಾದರಗಿತ್ತಿಯ ಪಟ್ಟ. ಯಾಕೆಂದರೆ, ಅವಳು ಗಂಡನೆಂದು ಧೇನಿಸಿದ್ದು ಕಲ್ಲನ್ನೊ, ಗೊಂಬೆಯನ್ನೊ ಆಗಿರಲಿಲ್ಲ; “ಸಜೀವ ಗಂಡಸಾಗಿದ್ದ!”

ಇದನ್ನು ಇನ್ನೂ ವಿವರಿಸುವುದು ಬೇಕಿಲ್ಲ. ಅಲ್ಲದೆ ಇದಕ್ಕಿಂತ ಹೆಚ್ಚಾಗಿ ನಾನಿಲ್ಲಿ ಚೇತನಾ ಅವರ ಕವಿತೆಗಳ ಭಾಗಗಳನ್ನು ಉದ್ಧರಿಸುವುದಕ್ಕೂ ಬಯಸುವುದಿಲ್ಲ. ಹೇಳಿಕೊಳ್ಳುವ, ಹೇಳುವ ತೀವ್ರತೆ ಅವರೊಳಗೆ ಗಾಢವಾಗಿದೆ ಎಂಬುದಷ್ಟೇ ಮುಖ್ಯವಾಗಿ ಕಂಡಿದೆ. ಈ ತೀವ್ರತೆಯೇ ಅವರನ್ನು ಮುನ್ನಡೆಸಬಲ್ಲುದು.

ವೆಂಕಟ್ರಮಣ ಗೌಡ 
(ಮುನ್ನುಡಿಯಿಂದ)

Advertisements

ಬೇರೆಯೇ ಇವೆ ಬಂಡಾಯದ ಕಾರಣಗಳು!

ನವೆಂಬರ್ 9, 2007

೧೮೫೭ರ ಬಂಡಾಯ
ಪ್ರ: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)
ಕೋಲಾರ ಜಿಲ್ಲಾ ಸಮಿತಿ, ಕೋಲಾರ
ಬೆಲೆ: ೨೦ ರೂ. ಪುಟಗಳು: ೬೪

1857.jpg

ಬ್ರಿಟಿಷರ ಅಡಿಯಲ್ಲಿದ್ದ ಭಾರತದ ಸಿಪಾಯಿಗಳು ನಡೆಸಿದ ೧೮೫೭ರ ಬಂಡಾಯಕ್ಕೆ ಬಂದೂಕಿನ ಕಾಡತೂಸಿಗೆ ಬಳಸಿದ ಹಂದಿ ಮತ್ತು ದನದ ಕೊಬ್ಬನ್ನು ಕಚ್ಚಿ ತೆಗೆಯಬೇಕಾದ ಪರಿಸ್ಥಿತಿ ಕಾರಣವೆಂಬಂತೆ ಹಲವೆಡೆ ಬಿಂಬಿಸಲಾಗಿತ್ತು. ಆದರೆ ಈ ಪುಸ್ತಕದಲ್ಲಿನ ವಿವಿಧ ತಜ್ಞರ ಲೇಖನಗಳಿಂದ ತಿಳಿದುಬರುವ ಪ್ರಮುಖ ಅಂಶವೇನೆಂದರೆ, ಅಂದಿನ ಸಾಮಾಜಿಕ ಪರಿಸ್ಥಿತಿ, ಬ್ರಿಟಿಷರು ೧೮೩೯ರಿಂದ ೧೮೫೭ರವರೆಗೆ ವಿವಿಧ ದೇಶಗಳಲ್ಲಿ ನಡೆಸಿದ ೧೦ ಯುದ್ಧಗಳಲ್ಲಿ ಭಾರತೀಯ ಸೈನಿಕರ ಬಳಕೆ ಮತ್ತು ವಿಪರೀತ ಸಾವು, ನೋವುಗಳು, ಕೆಲವು ದಲ್ಲಾಳಿ ಜಮೀನ್ದಾರರಿಗೆ ರಿಯಾಯ್ತಿ ನೀಡಿ, ಸಾಮಾನ್ಯ ರೈತರಿಗೆ ವಿಧಿಸಿದ ವಿಪರೀತ ತೆರಿಗೆ ಮತ್ತು ಗೇಣಿ, ದೇಶೀಯ ರಾಜರುಗಳನ್ನು ಕುತಂತ್ರದಿಂದ ಸೋಲಿಸಿ ಸಂಸ್ಥಾನಗಳನ್ನು ಕಬಳಿಸುವುದು ಇಂತಹ ಹತ್ತಾರು ಕಾರಣಗಳು ಬಂಡಾಯಕ್ಕೆ ನಾಂದಿ ಹಾಡಿವೆ. ಅಂದು ಆಧುನಿಕ ರಾಷ್ಟ್ರ್‍ಈಯತೆಯ ಕಲ್ಪನೆ ಇರದಿದ್ದರೂ, ಬ್ರಿಟಿಷರ ವಿರುದ್ಧ ನಾವೆಲ್ಲಾ ಒಂದಾಗಬೇಕೆಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಮತ್ತಿತರ ಧರ್ಮಗಳ ಜನರ ಐಕ್ಯತೆಯನ್ನು ಸಾರಿದ ಸಮರವದು.

(ಪ್ರಸ್ತಾವನೆಯಿಂದ)

ಬೌದ್ಧಿಕ ಸಿದ್ಧಮಾದರಿಗಳ ನಿರಾಕರಣೆ

ನವೆಂಬರ್ 9, 2007

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು
ಸಂ: ವಿನಯ್ ಲಾಲ್, ಅಶೀಶ್ ನಂದಿ
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-೫೭೭೪೧೭
ಬೆಲೆ: ೧೬೦ ರೂ. ಪುಟಗಳು: ೨೮೦

*

ದು ಪರಿಭಾಷೆಗಳ ಪರಿಚಯವಿಲ್ಲದವರಿಗೆ ತಾಂತ್ರಿಕ ಪದಪ್ರಯೋಗಗಳ ಹಿನ್ನೆಲೆಯನ್ನು ಅರ್ಥ ಮಾಡಿಸುವ ಪ್ರಯತ್ನ ಅಲ್ಲ; ಅದಕ್ಕಿಂತ ಘನವಾದೊಂದು ಉದ್ದಿಶ್ಯ ಈ ಕೋಶದ ಹಿಂದಿದೆ. ಒಂದು ಕಡೆಯಿಂದ, ಈ ಕೋಶವು ನಮ್ಮ ಕಾಲ-ದೇಶಗಳ ಕೆಲವು ಮುಖ್ಯ ಪದ-ಪದಾರ್ಥ-ಪರಿಕಲ್ಪನೆ-ಪ್ರಕ್ರಿಯೆಗಳ ಕಥೆಯನ್ನು ಹೇಳುತ್ತಲೇ ಜತೆಜತೆಗೇ, ಅವುಗಳ ಹಿಂದಿನ ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣವನ್ನು ಅನಾವರಣಗೊಳಿಸುತ್ತದೆ. ಮತ್ತು ಆ ಮೂಲಕ ಅರ್ಥಕಾರಣ, ಜ್ಞಾನಕಾರಣಗಳ ವಿವಿಧ ಅಪರಿಚಿತ ಆಯಾಮಗಳನ್ನು ಕುರಿತಂತೆ ಅಸಾಧಾರಣವಾದ ಒಳನೋಟಗಳನ್ನು ನೀಡುತ್ತದೆ ಕೂಡ. ಆದ್ದರಿಂದಲೇ ವಿಷಯದಲ್ಲಿ ತುಂಬ ವೈವಿಧ್ಯವನ್ನೊಳಗೊಂಡಿರುವಂತಹ ಈ ಲೇಖನಮಾಲಿಕೆಯಲ್ಲಿ ಸ್ಪಷ್ಟವಾದ ಒಂದು ಸ್ಥಾಯಿಸೂತ್ರವೂ ಇದೆ. ಅದು, ಇವತ್ತಿನ ಆಧುನಿಕ (ಮತ್ತು ಆಧುನಿಕೋತ್ತರ) ಜಗತ್ತುಗಳು “ಸಾಮಾನ್ಯಜ್ಞಾನ”ವೆಂಬಂತೆ ರೂಢಿಗೊಳಿಸಿಕೊಂಡಿರುವ ಸಿದ್ಧ ಯೋಚನಾಕ್ರಮಗಳ ವಿಮರ್ಶೆ; ಅರ್ಥಾತ್, ಬೌದ್ಧಿಕ ಸಿದ್ಧಮಾದರಿಗಳ ನಿರಾಕರಣೆ.

ಅಕ್ಷರ ಕೆ ವಿ

“ಬಾಲಕ” ರಾಮದಾಸ್

ನವೆಂಬರ್ 9, 2007

ranew.jpg

ಪ್ರೊ. ಕೆ ರಾಮದಾಸ್ ಬಾಲ್ಯ
ಲೇ: ವಿಲಿಯಂ
ಪ್ರ: ಅಭಿರುಚಿ ಪ್ರಕಾಶನ, ನಂ.೩೮೬, ೧೪ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ, ಸರಸ್ವತೀಪುರ, ಮೈಸೂರು-೯, ದೂರವಾಣಿ: ೯೪೪೮೬೦೮೯೨೬
ಬೆಲೆ: ೪೫ ರೂ. ಪುಟಗಳು: ೬೦

ಪ್ರೊ. ಕೆ ರಾಮದಾಸ್ ನನ್ನ ಬಾಲ್ಯ ಸ್ನೇಹಿತ. ಇದು ಸುಮಾರು ೫೫ ವರ್ಷಗಳ ಸ್ನೇಹ. ರಾಮದಾಸ್ ಬರೆದಿರುವ ಒಂದು ಮಾತಿದೆ – “ನಾನೊಬ್ಬ ರಿಕಾರ್ಡ್ ಇಲ್ಲದ ಸಂಗೀತಗಾರನಂತೆ ಅಥವಾ ಜಾನಪದ ಹಾಡುಗಾರ ಎಂದರೆ ಸರಿಹೋಗಬಹುದು.” ಹೌದು, ಈವರೆಗೂ ರಾಮದಾಸನ ಹೋರಾಟಗಳು ಅಕ್ಷರಗಳಲ್ಲಿ ದಾಖಲೆಯಾಗಲಿಲ್ಲ. ತನ್ನ ಬಗ್ಗೆ ಪುಸ್ತಕ ತರುವುದರಲ್ಲಿ ರಾಮದಾಸ್ ಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ತನ್ನ ಬದುಕಿನ ತುಂಬ ಪ್ರಾಂಜಲ ಹೋರಾಟ ನಡೆಸಿದ ವಿಚಾರವಾದಿ ರಾಮದಾಸನ ವಿಚಾರಗಳೇನು ಎಂದು ತೋರಿಸಲು ಒಂದು ಚಿಕ್ಕ ಪುಸ್ತಕವೂ ಇಲ್ಲ. ಇನ್ನು ಮುಂದೆ ಪುಸ್ತಕಗಳು ಬರಬಹುದು. ಸಾಗರದಲ್ಲಿ ತನ್ನ ಬಾಲ್ಯ ಕಳೆದ ರಾಮದಾಸನನ್ನು ಕುರಿತು ಪುಸ್ತಕ ಬರೆಯಬೇಕೆನ್ನುವುದು ನನ್ನ ಬಹಳ ದಿನಗಳ ಕನಸು. ಆದರೆ ಪ್ರಿಯಮಿತ್ರ ತೀರಿಕೊಂಡ ಮೇಲೆ ಬರೆಯುತ್ತಿರುವುದು ನೋವಿನ ಸಂಗತಿ.

ಹೋರಾಟಗಾರನೊಬ್ಬನ ಬದುಕು ಅವನ ಬಲ್ಯದಲ್ಲಿ ಹೇಗಿತ್ತು ಅನ್ನುವುದು ಮುಖ್ಯ. ರಾಮದಾಸ್ ವಿಚಾರಗಳು, ಹೋರಾಟದ ಪರಿ, ಸಾಧನೆ, ಸಂಕಷ್ಟಗಳ ಆಳ ಎತ್ತರಗಳ ಅಳತೆ ಮಾಡುವ ಗೋಜಿಗೆ ಹೋಗದೆ ರಾಮದಾಸನ ಬಾಲ್ಯದಲ್ಲಿ ನಾನು ಕಂಡುಂಡ ಕೆಲವು ನೆನಪುಗಳನ್ನು ಮಾತ್ರ ಇಲ್ಲಿ ಕೊಡುತ್ತಿರುವೆ.

(ಲೇಖಕನ ಮಾತುಗಳಿಂದ)

ಎಷ್ಟೋ ಹಾದಿ ಸವೆಸಿ ಬಂದೀನಿ

ನವೆಂಬರ್ 9, 2007

enagi.jpg

ಬಣ್ಣದ ಬದುಕಿನ ಚಿನ್ನದ ದಿನಗಳು
ಏಣಗಿ ಬಾಳಪ್ಪನವರ ರಂಗಾನುಭವ ಕಥನ
ನಿರೂಪಣೆ: ಗಣೇಶ ಅಮೀನಗಡ
ಪ್ರ: ಪ್ರಸಾಧನ ಪ್ರಕಾಶನ, ಭಾರತೀನಗರ, ಬಿಜೈ, ಮಂಗಳೂರು-೫೭೫೦೦೪, ಮೊಬೈಲ್: ೯೪೪೮೧೯೧೨೪೯
ಬೆಲೆ: ೬೦ ರೂ. ಪುಟಗಳು: ೧೬೪

*

“ಬಣ್ಣದ ಬದುಕಿನಲ್ಲಿ ಕಷ್ಟ-ನಷ್ಟಗಳನ್ನು, ಸ್ತುತಿ, ನಿಂದೆಗಳನ್ನು ಸಹಿಸಿ, ಅವುಗಳನ್ನೇ ಜೀರ್ಣಿಸಿಕೊಂಡ ಕಲಾವಿದ ನಾನು. ನನ್ನ ಮ್ಯಾಲೆ ಅಪವಾದ, ಆರೋಪ ಕೊಟ್ಟವರು ನಮ್ಮವರೇ. ಅದು ಸಹಜ. ಆರೋಪ ಕೊಡುವವರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅಕ್ಕಮಹಾದೇವಿಯ ವಚನ ನೆನಪಿಗೆ ಬರುತ್ತಿದೆ. ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ? ಹಂಗ ಎಷ್ಟೋ ಹಾದಿ ಸವೆಸಿ ಬಂದೀನಿ. ಮನುಷ್ಯ ಹುಟ್ಟುವಾಗ ಇಂಥವನಾಗುತ್ತೇನೆ ಎಂದು ಹುಟ್ಟಿ ಬರುವುದಿಲ್ಲ. ಜೀವನದ ಹೋರಾಟದಲ್ಲಿ ಏನೇನೋ ಆಗುತ್ತೇವೆ. ಹೇಗೋ ಆಗುತ್ತೇವೆ. ಸುದೈವದಿಂದ ನಾನು ಕಲಾವಿದನಾದೆ.”

ಕಂಡಷ್ಟು ಹಿಮಾಲಯ

ನವೆಂಬರ್ 3, 2007

ಕುಲು ಕಣಿವೆಯಲ್ಲಿ
ಲೇ: ಜಿ ಪಿ ಬಸವರಾಜು
ಪ್ರ: ಲೋಹಿಯಾ ಪ್ರಕಾಶನ, “ಕ್ಷಿತಿಜ”, ಕಪ್ಪಗಲ್ಲು ರಸ್ತೆ, ಬಳ್ಳಾರಿ-೫೮೩೧೦೩
ಬೆಲೆ: ೬೦ ರೂ. ಪುಟಗಳು: ೧೪೨

ಹಿಮಾಲಯ ಎಂಬುದು ಬಹು ದೊಡ್ಡ ಕನಸು. ಎಷ್ಟೊಂದು ವರ್ಷಗಳು ಕಾಯಬೇಕಾಯಿತು ಈ ಹಿಮಾಲಯದ ದರ್ಶನಕ್ಕೆ! ಹಿಮಾಲಯದ ಮುಂದೆ ನಿಂತರೆ ಮನುಷ್ಯನಿಗೆ ತನ್ನ ಅಸ್ತಿತ್ವದ ಬಗ್ಗೆಯೇ ಅನುಮಾನ ಹುಟ್ಟುತ್ತದೆ. ಅಂಥ ಅನುಮಾನದಲ್ಲಿ, ಆದರೆ ಒಂದು ಬಗೆಯ ಬೆರಗಿನಲ್ಲಿ, ರೋಮಾಂಚನದಲ್ಲಿ, ಹರ್ಷಾತಿರೇಕದಲ್ಲಿ ಹಿಮಾಲಯ ನನಗೆ ಕಂಡಷ್ಟನ್ನು ಇಲ್ಲಿ ದಾಖಲು ಮಾಡಲು ಯತ್ನಿಸಿದ್ದೇನೆ. ನನ್ನ ಬೆರಗಿನಲ್ಲಿ ಕೈಗೆ ಸಿಕ್ಕ ಹಿಮಾಲಯ ಕರಗಿಹೋಯಿತೊ ಅಥವಾ… ಅದನ್ನು ನೀವೇ ಹೇಳಿ.

(ಲೇಖಕರ ಮಾತುಗಳಿಂದ)

ದುರ್ಬಲರ ಬದುಕಿಗೆ ಕನ್ನಡಿ

ನವೆಂಬರ್ 3, 2007

ಮೋಹನದಾಸ
ಲೇ: ಉದಯಪ್ರಕಾಶ, ಅನು: ಆರ್ ಟಿ ಹೆಗಡೆ
ಪ್ರ: ಲೋಹಿಯಾ ಪ್ರಕಾಶನ, “ಕ್ಷಿತಿಜ”, ಕಪ್ಪಗಲ್ಲು ರಸ್ತೆ, ಬಳ್ಳಾರಿ-೫೮೩೧೦೩
ಬೆಲೆ: ೫೦ ರೂ. ಪುಟಗಳು: ೧೦೮

ದಯಪ್ರಕಾಶ ಮಧ್ಯಪ್ರದೇಶದವರು. ಅಲ್ಲಿನ ಸರ್ಕಾರದ ಸಂಸ್ಕೃತಿ ವಿಭಾಗದಲ್ಲಿ ವಿಶೇಷ ಅಧಿಕಾರಿ. ಟೈಮ್ಸ್ ಆಫ್ ಇಂಡಿಯಾ ಸಾಪ್ತಾಹಿಕದಲ್ಲಿ ಕೆಲಸ. ಟೈಮ್ಸ್ ರಿಸರ್ಚ್ ಫೌಂಡೇಷನ್ನಿನಲ್ಲಿ ಪತ್ರಿಕೋದ್ಯಮ ಬೋಧನೆ. ೩ ಕವನಸಂಕಲನಗಳು, ೮ ಕಥಾ ಸಂಕಲನಗಳು, ಒಂದು ಕಾದಂಬರಿ ಪ್ರಕಟವಾಗಿದೆ. “ಮೋಹನದಾಸ” ಚಲನಚಿತ್ರವಾಗುತ್ತಿದೆ.

*

ದೇಶಕಾಲದಲ್ಲಿ ಉದಯಪ್ರಕಾಶರ “ತಿರಿಛಾ” ಓದಿ ಪ್ರಭಾವಿತನಾದ ನಾನು ಪುಸ್ತಕರೂಪದಲ್ಲಿ ಪ್ರಕಟವಾದ ಅವರ “ಮೋಹನದಾಸ” ನೀಳ್ಗತೆಯನ್ನು ತರಿಸಿ ಓದಿದೆ. ವಸ್ತು, ಶೈಲಿ, ತಂತ್ರಗಳ ದೃಷ್ಟಿಯಿಂದ ಅದ್ಭುತವೆನಿಸುವ ಕಥೆಯಿದು. ಗ್ರಾಮಸಂವೇದನೆಯೇ ಮೂಲವಾಗುಳ್ಳ ಈ ಕಥೆ ದುರ್ಬಲರ ದಾರುಣ ಬದುಕನ್ನು ಅನಾವರಣಗೊಳಿಸುತ್ತಿರುವಂತೆಯೇ ಶಕ್ತರ ಅಮಾನವೀಯ ಮುಖವನ್ನೂ ಬಯಲಿಗಿಡುತ್ತದೆ. ಇಡೀ ಕಥೆಗೆ ಅಂತರಂಗವನ್ನು ಕಲಕುವ, ತಲ್ಲಣಗೊಳಿಸುವ ದ್ರಾವಕ ಶಕ್ತಿ ಇದೆ. ಮೂಲತಃ ಮೋಹನದಾಸ ನೀಳ್ಗತೆ ಪ್ರಸಿದ್ಧ ಕಥಾ ಮಾಸಿಕ ಹಂಸದಲ್ಲಿ ಪ್ರಕಟವಾಯಿತು.

(ಅನುವಾದಕರ ಮಾತುಗಳಿಂದ)