Archive for the ‘ಅಮೃತಕ್ಕೆ ಗರುಡ’ category

ಸಂಘರ್ಷ ಪರಂಪರೆಯ ಭವ

ನವೆಂಬರ್ 26, 2007

suri.jpgಎನ್ನ ಭವದ ಕೇಡು
ಲೇ: ಎಸ್ ಸುರೇಂದ್ರನಾಥ್
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೭೫ ರೂ. ಪುಟಗಳು: ೨೩೬

———————————–

 

ವಿಜಿ

ನ್ನದೊಂದು ಕೂದಲೆಳೆಯಿಂದಲೇ, ಬೀಳುತ್ತಿದ್ದ ಮರವನ್ನು ತಡೆದು ನಿಲ್ಲಿಸಿದ ಗಟ್ಟಿ ಹೆಂಗಸಿನ ಕಥೆ ಕೇಳಿಸಿಕೊಳ್ಳುತ್ತ ಬೆಳೆದ ನನ್ನಂಥವನಿಗೆ “ಎನ್ನ ಭವದ ಕೇಡು” ಕಾದಂಬರಿಯ ಲೋಕ ಹತ್ತಿರದ್ದು ಎನ್ನಿಸುತ್ತದೆ. ಇದನ್ನು ಇನ್ನೂ ಹತ್ತಿರ ತಂದುಕೊಳ್ಳುವುದಕ್ಕೆ, ಇದರೊಳಗೆ ನಡೆದಾಡಿಕೊಂಡು ಏನು ಎತ್ತ ಎಂದು ಹುಡುಕುವುದಕ್ಕೆ ಯಾವ ಮ್ಯಾಜಿಕ್ ರಿಯಲಿಸಮ್ಮಿನ ಹಂಗೂ ಬೇಕಾಗಿಲ್ಲ.

ರಮಿಸುವ ಧಾಟಿಗಿಂತ ಆಕ್ರಮಣಗೈಯುವ, ಎಲ್ಲವನ್ನೂ ಒಂದೇ ಪಟ್ಟಿಗೆ ಸೂರೆಗೈದುಬಿಡುತ್ತೇನೆ ಎಂಬಂತೆ ಕುದಿಯುವ, ಬಿರುಗಾಳಿಯಂತೆ ಅಬ್ಬರಿಸಿ ಬರುವ ಕಥೆಗಳಲ್ಲೇ ಸ್ವಂತಿಕೆಯೆಂಬುದು ಒಂದು ಗುಂಜಿಯಷ್ಟಾದರೂ ಜಾಸ್ತಿಯೇನೊ. ಹಾಗೆಂದು ಇದು ಬಂಡಾಯ ಚಳವಳಿಯ ಕಥನ ಮಾದರಿಯೇನಲ್ಲ; ಬದಲಾಗಿ, ಕಥೆಯ ಅಂತರಂಗದಲ್ಲೇ ಇರಬಹುದಾದ, ಹಾಗೆ ನೋಡಿದರೆ ಪ್ರತಿಯೊಬ್ಬ ಮನುಷ್ಯನೊಳಗೂ ಇರಬಹುದಾದ, ಅಷ್ಟೇ ಏಕೆ, ಮೂಕ ಪ್ರಾಣಿಗಳೊಳಗೂ ಇರಬಹುದಾದ ಒಂದು ಬಗೆಯ ಸ್ಫೋಟಕ ಗುಣ. ಉದ್ದಕ್ಕೂ ಸಿಟ್ಟನ್ನು ಎಲ್ಲೂ ಪ್ರಕಟಗೊಳಿಸದ ಕಥೆಯೊಂದು ತನ್ನ ಅಂತಃಶಕ್ತಿಯಿಂದಲೇ ಕೆಂಡದಂಥ ಬಂಡಾಯದ ಅಸಾಧಾರಣ ರೂಪಕವಾಗಿ ನಿಲ್ಲಬಲ್ಲದು. ಇಂಥವುಗಳ ದಾರಿಯಲ್ಲಿ “ಎನ್ನ ಭವದ ಕೇಡು” ಹೇಳುವ ಕಥೆ, ಒಂದಿಡೀ ಜೀವಮಾನದೊಳಗಿನ ಮೋಹ, ಮಮಕಾರ, ವ್ಯಗ್ರತೆ, ನಿಷ್ಠುರತೆ, ಸ್ವಪ್ರತಿಷ್ಠೆ, ಸ್ವಾಭಿಮಾನ, ಸೇಡು, ದಾಹ -ಇವೆಲ್ಲವನ್ನೂ ಕೂಡಿಸಿಕೊಂಡು ಮಳೆಗಾಲದ ಬೆಟ್ಟದ ಹೊಳೆಯಂತೆ ಕಾಣಿಸುತ್ತದೆ. ಬೆಟ್ಟದ ಹೊಳೆ ನೋಡಲು ಪುಟ್ಟದೆನ್ನಿಸಿದರೂ ಹಾಯಲಾರದ ಹೊಳೆ. ನೀರಿಳಿಯುವವರೆಗೂ ಕಾಯುವ ತಾಳ್ಮೆಯನ್ನು ಹೇಳಿಕೊಡುವ ಹೊಳೆ. “ಎನ್ನ ಭವದ ಕೇಡು” ಇಂಥದೊಂದು ಕಾಯುವಿಕೆಯಲ್ಲೇ ಕದಲುವ, ಕನಲುವ ಕಥೆ.

ಈ ಕಥೆಯೊಳಗೆ ಪ್ರವೇಶಿಸುತ್ತಿದ್ದಂತೆ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಮಾಮಿಯದು. ಆದರೆ, ಮಾಮಿಯ ಬದಲಾಗಿ ಸರಸ್ವತಿಯನ್ನು ಕೇಂದ್ರಪಾತ್ರವಾಗಿ ನೋಡುತ್ತ ಮುಂದುವರಿದರೆ ಹೇಗಿರುತ್ತದೆ ಎಂಬ ಕುತೂಹಲದೊಂದಿಗೆ ಈ ಕಥನದ ಹೆಜ್ಜೆ ಜಾಡನ್ನು ಕಂಡುಕೊಳ್ಳಬೇಕೆನ್ನಿಸುತ್ತದೆ ನನಗೆ. ಇಲ್ಲಿ ಮಾಮಿಯೇ ಎಲ್ಲವೂ ಅಲ್ಲ. ಅವಳಿಗೆ ಸಾವಿನ ವಾಸನೆ ಗೊತ್ತಾಗುತ್ತದೆ. ಆದರೆ ಅಡುಗೆ ಮನೆಯ ವಾಸನೆಯನ್ನೇ ಹಿಡಿದುಕೊಂಡು ಹುಟ್ಟಿ, ಅದರ ಸತತ ಸಹವಾಸದಲ್ಲೇ ಬೆಳೆದ ಸರಸ್ವತಿಯ ಜೀವನ್ಮುಖೀ ಗುಣ ನೇರವಾಗಿ ಮಾಮಿಗೆ ಕಡೆಯತನಕವೂ ಎದುರಾಗಿ ನಿಲ್ಲುವಂಥದ್ದು. ಸಾವಿನ ವಾಸನೆ ಹಿಡಿದು ಯಾವ ಕ್ಷಣವೆಂದರೆ ಆ ಕ್ಷಣ ಹೊರಟುಬಿಡುವ ಮಾಮಿ, ಒಂದು ಹೊಸ ಜೀವ ಈ ಜಗತ್ತಿಗೆ ಬರುವಾಗ ಮಾತ್ರ ಉಪಸ್ಥಿತಳಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾದಂಬರಿಯೊಳಗಿನ ಇಂಥ ಎರಡು ಸಂದರ್ಭಗಳನ್ನು ನೋಡುವುದಾದರೆ, ಮೊದಲನೆಯದು, ರಾಧೆ ಹೆರುವ ಸಮಯದಲ್ಲಿನ ಮಾಮಿಯ ವಿಮುಖತೆ. ಆಗ ಹೊಸ ಜೀವವಾಗಿ ಜಗತ್ತಿಗೆ ಸರಸ್ವತಿಯ ಪ್ರವೇಶವಾಗುತ್ತದೆ. ಎರಡನೆಯದು, ಯಮುನೆಯ ಹೆರಿಗೆಯ ವೇಳೆ. ಈಗಲೂ ಮಾಮಿ ಇಲ್ಲ. ಏನೆಂದರೆ ಏನೂ ಗೊತ್ತಿಲ್ಲದ ಸರಸ್ವತಿಯೊಬ್ಬಳೇ ನಿಂತು ಹೆರಿಗೆ ಮಾಡಿಸುತ್ತಾಳೆ. ಅವಳ ಪವಾಡ ಸದೃಶ ಚಾಕಚಕ್ಯತೆಗೆ ಸ್ವತಃ ವೈದ್ಯನಾಗಿರುವ ಅಜಿತನೇ ಬೆರಗಾಗಿ ಹೋಗುತ್ತಾನೆ. ಹೆಜ್ಜೆ ಹೆಜ್ಜೆಗೂ ತನಗೆ ವಿಷ ಹಾಕಲು ಹವಣಿಸುತ್ತಿದ್ದಾರೆ ಎಂದು ಆತಂಕಗೊಳ್ಳುವ ಮಾಮಿ ಸಾವಿನ ಭಯದಲ್ಲೇ ಬದುಕುತ್ತಿದ್ದಾಳೇನೋ ಎನ್ನಿಸುತ್ತದೆ. ಅದೇ ಹೊತ್ತಿಗೆ, ತನ್ನ ಆಕಾಂಕ್ಷೆಗಳ ಸಮೀಪ ಹೋಗುವುದಕ್ಕೆ ಸಾವಿನ ದಾರಿಯೇ ಆದರೂ ಸರಿ, ಅದನ್ನು ಬಳಸುವ ಜೀವನತೀವ್ರತೆ ಸರಸ್ವತಿಯದ್ದಾಗಿದೆ. ಮಗು ಹುಟ್ಟಿದರೆ ತಾನು ಸಾಯುತ್ತೇನೆ ಎಂಬ ಭಯದಿಂದಲೇ ಅದಕ್ಕೆ ವಿಮುಖಳಾಗುವ ಮಾಮಿ, ಇತ್ತ ಹೊಸ ಜೀವವನ್ನೂ ಸ್ವಾಗತಿಸಲಾರದೆ, ಅತ್ತ ಸಾವನ್ನೂ ದಿಟ್ಟತನದಿಂದ ಎದುರಿಸಲಾಗದೆ, ವಿಲಕ್ಷಣ ಅತಂತ್ರ ಸ್ಥಿತಿಯಲ್ಲಿ ಬೇಯುತ್ತಾಳೆ. ಸತ್ತೇಹೋಗಿದ್ದಾಳೆ ಎಂದೇ ಎಲ್ಲರೂ ಭಾವಿಸುವ ಹಾಗಿರುವ ಮರಣಮುಖಿ ಭಂಗಿಯಲ್ಲಿ ಇನ್ನೂ ಸಾಯದೇ ಉಳಿದಿರುವವಳು ಅವಳು. ಮಂತ್ರದಂಡವೇನೋ ಎಂಬಂತೆ ಕಾಣಿಸುವ ಅವಳ ಕೈಯಲ್ಲಿನ ಕೋಲೂ ಅಷ್ಟೆ. ಸರಸ್ವತಿಯನ್ನು ಜೀವ ಹೋಗುವ ಹಾಗೆ ಬಡಿಯಬಲ್ಲ ಆ ಕೋಲಿಗೆ, ಕೆಟ್ಟ ಮನಸ್ಸಿನವನಾದ, ವಿಷಸರ್ಪದಂತಿರುವ ಚಿನ್ನಸ್ವಾಮಿಯನ್ನು ಬಡಿದರೂ ಅವನ ದುಷ್ಟತನವನ್ನು ದಮನಗೊಳಿಸುವ ಶಕ್ತಿಯಿಲ್ಲ. ಹೀಗೆ ಇಡೀ ಕಥೆಯೇ ಜೀವನ್ಮರಣ ಹೋರಾಟ; ಸರಸ್ವತಿ ಮತ್ತು ಮಾಮಿಯ ಮಧ್ಯದ ಸಂಘರ್ಷ.

ಇನ್ನೂ ಒಂದು ಕಾರಣಕ್ಕಾಗಿ ಮಾಮಿಗಿಂತ ಸರಸ್ವತಿ ಮುಖ್ಯಳೆನ್ನಿಸುತ್ತಾಳೆ. ಅದು ಅವಳ ಕಣ್ಣೀರಿನ ಕಾರಣ. ಈ ಕಣ್ಣೀರಿನ ಮೂಲಕವೇ ಅವಳು ನಮ್ಮ ಮನೆಯ ಹುಡುಗಿಯಂತಾಗಿಬಿಡುತ್ತಾಳೆ. ಸಂಕಟ ಮಾತ್ರವಲ್ಲ, ಪ್ರತಿಭಟನೆಯೂ ಆಗಿ ಹರಿಯುತ್ತದೆ ಅವಳ ಕಣ್ಣೀರು. ಅದು ಮನೆಯನ್ನೆಲ್ಲ ತೋಯಿಸಿ ಹರಿಯುತ್ತ, ಹಿತ್ತಿಲಿನ ಕರಿಬೇವಿನ ಮರಕ್ಕೂ ನೀರುಣಿಸುತ್ತದೆ. ಹೀಗೆ ಯಾತನೆಯ ಪ್ರವಾಹವೊಂದು ಇಲ್ಲಿ ಪ್ರವಹಿಸುತ್ತದೆ.

ಸರಸ್ವತಿ, ಮಾಮಿಯ ಹಾಗೆ ತಾನು ಮೋಹಿಸಿದ್ದವನ ನೆನಪನ್ನು ಪೆಠಾರಿಯೊಳಗೆ ಹೂತಿಟ್ಟು ಕೂತಿರುವವಳಲ್ಲ. ತಾನು ಒಲಿದವನು ಈಗ ತನ್ನವನಲ್ಲ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಅವನೆಡೆಗೆ ತುಡಿಯುವವಳು, ಅವನಿಗೆ ಸೋಲುವವಳು. ಈ ಸೋಲಿನಲ್ಲೇ ಬದುಕಿನ ಗೆಲುವನ್ನು ಗಳಿಸಿ ನಳನಳಿಸುವವಳು. ಆದರೆ ಮಾಮಿ ಮಾತ್ರ, ಸರಸ್ವತಿಯನ್ನು ಸೋಲಿಸಬೇಕೆಂಬ ಹಠದಲ್ಲೇ ಮತ್ತೆ ಮತ್ತೆ ಹತಾಶೆಯ ಪ್ರವಾಹಕ್ಕೆ ಸಿಕ್ಕು ನಲುಗುವವಳು. ಗೆದ್ದೆನೆಂದುಕೊಂಡ ಮರುಕ್ಷಣದಲ್ಲೇ ಮತ್ತಷ್ಟು ಮುರುಟಿಹೋಗುವವಳು. ಅತ್ತ ಸರಸ್ವತಿ ತನ್ನ ಸ್ಫೋಟಕತೆಯಲ್ಲಿ, ಒಪ್ಪಿಸಿಕೊಳ್ಳುವಿಕೆಯಲ್ಲಿ, ಸ್ವೇಚ್ಛೆ ಎನ್ನಬಹುದಾದರೆ ಅಂಥ ಬಗೆಯಲ್ಲಿ ಸ್ವಪ್ನವನ್ನು ಮೀರುತ್ತ ಹೋದರೆ, ಇತ್ತ ಮಾಮಿ ತಾನೇ ತನಗೊಂದು ದುಃಸ್ವಪ್ನವಾದಳೇ?

ಕಾದಂಬರಿಯೊಳಗೆ ಹೆಂಗಸರ ಜಗತ್ತಿನ ಈ ಮುಖಾಮುಖಿ ಎಷ್ಟು ತೀವ್ರವಾಗಿದೆಯೆಂದರೆ, ದಾವಣಗೆರೆ ಮತ್ತು ಗೋವರ್ಧನರಾಯರ ಹೋಟೆಲ್ ಉದ್ಯಮದಂಥ ವ್ಯಾವಹಾರಿಕ ಪರಿಧಿ ಹಾಗೂ ಉನ್ಮಾದೀ ಕಳೆಯ ಬೃಂದಾವನ ಇವೆಲ್ಲ ಇಲ್ಲಿ ಒಂದು ನೆಪಕ್ಕಿವೆಯೇನೋ ಎನ್ನಿಸಿಬಿಡುತ್ತದೆ ಒಂದು ಹಂತದಲ್ಲಿ. ಪರಿಸ್ಥಿತಿಯ ವಿಲಕ್ಷಣ ವ್ಯೂಹದಲ್ಲಿ ಮಾಮಿಯ ಸವತಿಯಾಗಿ ರಾಧಾ ಬರುತ್ತಾಳೆ. ಯಮುನೆಯನ್ನು ನೋಡಲು ಬಂದವರು ಆಕೆಯ ತಂಗಿ ಸರಸ್ವತಿಯನ್ನು ಮೆಚ್ಚುತ್ತಾರೆ. ಸರಸ್ವತಿಯನ್ನು ಪ್ರೀತಿಸಿದ್ದವನು ಯಮುನೆಯನ್ನು ಮದುವೆಯಾಗಲು ಮುಂದಾಗುತ್ತಾನೆ. ತಂಗಿಯ ಪ್ರಿಯಕರನನ್ನು ತಾನು ಪಡೆದುಕೊಂಡೆನೆಂಬ ಗೆಲುವಿನ ಉನ್ಮಾದದಲ್ಲಿ ಯಮುನೆ ಮೆರೆಯುತ್ತಾಳೆ. ಮುಂದೆ ಅವರಿಬ್ಬರೂ ತನ್ನ ಕಣ್ತಪ್ಪಿಸಿ ಕೂಡುವುದು ತಿಳಿದು ಕುದಿಯುತ್ತಾಳೆ. ಮಾಮಿಯ ಮುಂದೆ ಸರಸ್ವತಿ ದಿಟ್ಟತನ ತೋರುತ್ತಾಳೆ. ಅವಳನ್ನು ಮಣಿಸಲು ಮಾಮಿ ಸದಾ ಹವಣಿಸುತ್ತಾಳೆ… ಹೀಗೆ ಬೃಂದಾವನದ ಅಂತರಂಗದೊಳಗೆ ನಿರಂತರ ಸ್ಫೋಟಗಳು. ಕಡೆಗೆ ಇಡೀ ಬೃಂದಾವನಕ್ಕೇ ದರಿದ್ರ ಹಿಡಿಯುತ್ತಿದೆ ಎಂಬ ಹಂತದಲ್ಲಿ, ಎದೆಯೊಳಗಿನ ದೀಪ ಆರದಂತೆ ಕಾಯಲು ಬಂದ ಒಳ್ಳೆಯ ಮನಸ್ಸಿನ ತರುಣ ವೈದ್ಯ ಅಜಿತ ಕೂಡ ಸೋತು ತನ್ನ ದಾರಿ ತಾನು ನೋಡಿಕೊಳ್ಳಬೇಕಾಗುತ್ತದೆ. ಬೃಂದಾವನದ ಅವನತಿಗೆ ದಾವಣಗೆರೆ ಸಾಕ್ಷಿಯಾಗುತ್ತದೆ.

ಇವೆಲ್ಲದರ ಮೂಲಕ ಸುರೇಂದ್ರನಾಥ್ ಅವರು ಕಟ್ಟಿಕೊಡುವ ಭವದ ಕೇಡಿನ ಕಥೆಯಲ್ಲಿ ಎರಡು ಪ್ರಧಾನವಾದ ರೂಪಕಗಳಿವೆ. ಒಂದು ಈ ಕಾದಂಬರಿಯ ಭಾಷೆ. ಇನ್ನೊಂದು ನಾಗಲಿಂಗಪುಷ್ಪದ ಘಮ. ಜೋಗಿಯವರು ಗುರುತಿಸುವ ಹಾಗೆ ಕಥೆ ಹೇಳುವುದು ಕೂಡ ಒಂದು ಪುಣ್ಯದ ಕೆಲಸ ಎಂಬಷ್ಟು ಶ್ರದ್ಧೆ ಇಲ್ಲಿ ತಾನೇ ತಾನಾಗಿ ನಡೆದಾಡಿದೆ. ಅದು ಬಸವರಾಜ ರಾಗಗಳನ್ನು ಬಿಡಿಸುತ್ತ ಸಾಗಿದ ಹಾಗೆ, ಆ ರಾಗದ ವಿಸ್ತಾರದಲ್ಲಿ ಗೋದಾವರಿ ತನ್ನನ್ನು ತಾನು ತನ್ಮಯವಾಗಿಸಿಕೊಳ್ಳುತ್ತ ಲೀನವಾಗುವ ಹಾಗೆ ಇದೆ. ಒಂದು ನಾದವನ್ನು, ಜೀವ ಸಾಧ್ಯತೆಯ ಲಯವನ್ನು ಗಳಿಸಿಕೊಳ್ಳುತ್ತ ಬೆಳೆಯುತ್ತ ಹೋಗುವ ಈ ಭಾಷೆ, ಕಥೆಗೊಂದು ಜಾನಪದ ಬೆರಗನ್ನು ಹಚ್ಚಿದೆ. ಭಾಷೆಯೇ ಒಂದು ರೂಪಕವಾಗುವ ಪರಿ ದೇವನೂರರ “ಕುಸುಮಬಾಲೆ”ಯಲ್ಲೂ ಇತ್ತು.

ಕಥೆಯಲ್ಲಿ ನಾಗಲಿಂಗಪುಷ್ಪದ ಘಮ ಕೂಡ ಅಸಾಧಾರಣ ರೂಪಕವಾಗಿ ಬಿತ್ತರಗೊಳ್ಳುತ್ತದೆ. ಭವದ ಉದ್ದೀಪನವನ್ನು ಸಾರುತ್ತ ಹರಡಿಕೊಳ್ಳುವ ನಾಗಲಿಂಗಪುಷ್ಪದ  ಘಮ ಮತ್ತು ಅದರ ನೇರಳೆ ಬೆಳಕಿಗೂ ದಾವಣಗೆರೆ ಸಾಕ್ಷಿಯಾಗುತ್ತದೆ. ಬೃಂದಾವನದೊಳಗೆ ಈ ನಾಗಲಿಂಗಪುಷ್ಪದ ಘಮ ಮೊದಲು ಅಡರಿಕೊಂಡದ್ದು ಮಾಮಿ ಮತ್ತು ಗೊವರ್ಧನರಾಯರ ಮೈಗಳು ಬೆಸೆದುಕೊಳ್ಳುತ್ತ, ಸೃಷ್ಟಿಗೆ ಅಣಿಯಾಗುವ ಮುನ್ನವೇ ಬೇರೆಯಾದ ದಿನ. ಎರಡನೇ ಬಾರಿಗೆ, ಗೋವರ್ಧನರಾಯರು ಮತ್ತು ರಾಧಾ ಸುಖದ ನಿಮಿಷಗಳನ್ನು ಉಣ್ಣತೊಡಗಿದಾಗ. ಅನಂತರವೆಲ್ಲ ನಾಗಲಿಂಗಪುಷ್ಪದ ಗಂಧಕ್ಕೆ ಕಾರಣವಾದದ್ದು ಸರಸ್ವತಿಯ ದೈಹಿಕ ತಹತಹ.

ರಾಧೆಯ ಸಾವಿನ ಬೆನ್ನಲ್ಲೇ, ಅವಳು ಆಸೆಪಟ್ಟು ಬೆಳೆದಿದ್ದ ನಾಗಲಿಂಗಪುಷ್ಪದ ಎರಡು ಗಿಡಗಳನ್ನು ಮಾಮಿ ಬೇರುಸಹಿತ ಕೀಳಿಸಿಹಾಕುತ್ತಾಳೆ. ಮುಂದೆ ಸರಸ್ವತಿಯ ಕಾರಣದಿಂದಾಗಿ ನಾಗಲಿಂಗಪುಷ್ಪದ ಘಮ ಮೂಡತೊಡಗಿದಾಗಲೂ ಎಲ್ಲಾದರೂ ನಾಗಲಿಂಗಪುಷ್ಪದ ಕುಡಿ ಉಳಿದುಕೊಂಡಿದೆಯೇ ಎಂದು ಹುಡುಕುತ್ತಾಳೆ. ಆದರೆ ಅವಳೆಷ್ಟು ಹುಡುಕಿದರೂ ನಾಗಲಿಂಗಪುಷ್ಪದ ಕುಡಿ ಮಾತ್ರ ಅವಳ ಕಣ್ತಪ್ಪಿಸಿ ಉಳಿದುಕೊಂಡೇಬಿಡುತ್ತದೆ. ಕಡೆಯವರೆಗೂ, ಅವಳು ಸೊಂಟ ಮುರಿದುಕೊಂಡು ಬಿದ್ದು ಅಸಹಾಯಕತೆಯಲ್ಲಿ ಕೂಗಿಕೊಳ್ಳುವ ಸ್ಥಿತಿಯಲ್ಲೂ ನಾಗಲಿಂಗಪುಷ್ಪ ಅವಳ ಪಾಲಿಗೊಂದು ನಿವಾರಿಸಿಕೊಳ್ಳಲಾಗದ ವೈರಿಯಂತೆ ಕಾಡುತ್ತದೆ; ನಿನಗೆ ಸಿಗಲಾರೆ ಎಂಬಂತೆ ಅವಳನ್ನು ಇನ್ನಷ್ಟು ಅಸಹಾಯಕತೆಯ ಕುದಿಯಲ್ಲಿ ಬೇಯಿಸಿಬಿಡುತ್ತದೆ. ಮಾಮಿಗೆ ಸವಾಲಾಗಿಯೇ ಉಳಿದುಹೋದ ಸರಸ್ವತಿಯ ಹಾಗೆ.

ಸಂಘರ್ಷ ಪರಂಪರೆಯ ಭವದಲ್ಲಿ ಗೆದ್ದದ್ದು ನಾಗಲಿಂಗಪುಷ್ಪದ ಘಮವೇ?

Advertisements

ಚೆಲುವು ಮತ್ತು ಗೋವಿನ ಹಿಂದಿನ ಚಾರಿತ್ರಿಕ ನೋವು

ನವೆಂಬರ್ 10, 2007

ಶಾಲಭಂಜಿಕೆ
ಲೇ: ಡಾ. ಕೆ ಎನ್ ಗಣೇಶಯ್ಯ
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೬೦ ರೂ. ಪುಟಗಳು: ೧೩೨

 bk1.gif

 *

ಸರಯೂ ಚೈತನ್ಯ

ವಿಜ್ಞಾನಿಯೊಬ್ಬ ಚರಿತ್ರೆಯ ಕಾಡೊಳಗೆ ಸುತ್ತುತ್ತಾ, ಶಿಲೆಗಳ ಮನಸ್ಸು ಮುಟ್ಟುತ್ತಾ ಹೇಳಿದ ಕಥೆಗಳಿವೆ ಇಲ್ಲಿ. ಆದರೆ, ವಿಜ್ಞಾನಿಯೊಬ್ಬ ಕಥೆಯೆಂಬುದನ್ನು ಥ್ರಿಲ್ಲರ್ ಎಂದಷ್ಟೇ ಭಾವಿಸಿಬಿಡುವಲ್ಲಿನ (ಲೇಖಕ ಈ ಕಥೆಗಳನ್ನು ಕರೆದಿರುವುದೇ ಥ್ರಿಲ್ಲರ್ ಗಳು ಎಂದು) ಮಿತಿಗಳು ಅಥವಾ ಅಪಾಯಗಳೂ ಈ ಕಥೆಗಳನ್ನು ಅಲ್ಲಲ್ಲಿ ಭಗ್ನಗೊಳಿಸಿವೆ.

ಒಬ್ಬ ವಿಜ್ಞಾನಿಯಾಗಿ ಡಾ. ಕೆ ಎನ್ ಗಣೇಶಯ್ಯ ಅವರು ಹೊಂದಿರುವ ಕುತೂಹಲವೇ ಈ ಕಥೆಗಳ ಕಾಲುದಾರಿ. ಆ ದಾರಿಯಲ್ಲಿ ಸಾಗುತ್ತಾ ಅವರು ಜೀವಪರಿಸರದ ಕಡೆಗೆ ಮಾತ್ರವಲ್ಲದೆ, ಕಾಲದ ಪದರಿನಲ್ಲಿ ಹೂತುಹೋಗಿರುವ ಚರಿತ್ರೆಯ ಅವಶೇಷಗಳತ್ತಲೂ ಕಣ್ಣುಹಾಯಿಸುತ್ತಾರೆ. ಅದಕ್ಕೊಂದು ವೈಜ್ಞಾನಿಕ, ತಾರ್ಕಿಕ ಚೌಕಟ್ಟು ಕೊಡಲು ನೋಡುತ್ತಾರೆ. ಮರೆತ ಪುಟಗಳನ್ನು ಬೆಳಕಿಗೆ ಹಿಡಿಯುವ ಪ್ರಯತ್ನದಲ್ಲಿ ಈ ಕಥೆಗಳು ಬೆಳಗುತ್ತವೆ. ಆದರೆ ಈ ಕಥೆಗಳ ಸಮಸ್ಯೆಯಿರುವುದು, ನಿಗೂಢತೆಯ ಸ್ಪರ್ಶ ಕೊಡಬೇಕು ಎಂದು ಕಥೆಗಾರ ಆಸೆಪಡುವಲ್ಲಿ.

ಮೊದಲ ಕಥೆ “ಶಾಲಭಂಜಿಕೆ”ಯನ್ನೇ ತೆಗೆದುಕೊಳ್ಳೋಣ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಹೆಂಡತಿಯನ್ನೂ ಮರೆತು ರಾಜ್ಯ ವಿಸ್ತಾರದ ಮೋಹದಲ್ಲಿ ಹೊರಟ ರಾಜನೊಬ್ಬ ಎದುರಿಸುವ ವ್ಯಂಗ್ಯವನ್ನು ಹೇಳುವ ಕಥೆ ಇದು. ಅಕಸ್ಮಾತ್ತಾಗಿ ಸುಂದರ ಕನ್ಯೆಯೊಬ್ಬಳ ವಿಗ್ರಹ ಕಂಡಾಗ ಅದರ ರೂಪದರ್ಶಿಯ ಬಗ್ಗೆ ಆತನಿಗೆ ಕುತೂಹಲವಾಗುತ್ತದೆ. ಅವಳು ಸಿಕ್ಕರೆ ತನ್ನವಳನ್ನಾಗಿ ಮಾಡಿಕೊಳ್ಳಬಹುದು ಎಂಬ ಲಂಪಟತನ ಹೆಡೆಯೆತ್ತುತ್ತದೆ. ಅದರ ಮೂಲ ಹುಡುಕಿಹೊರಟಾಗ ತನ್ನ ರಾಣಿಯೇ ಆ ರೂಪದರ್ಶಿ ಎಂಬುದು ತಿಳಿಯುತ್ತದೆ. ತನ್ನ ರಾಜ್ಯ ವಿಸ್ತಾರದ ಮೋಹವೇ ಅವನೆದುರು ಎಂದೆಂದೂ ಗೆಲ್ಲಲಾಗದ ವ್ಯಂಗ್ಯವಾಗಿ ನಿಲ್ಲುತ್ತದೆ. ಇನ್ನೊಂದು ಕಡೆಯಿಂದ, ಒಂದು ಹೆಣ್ಣಿನ ತಳಮಳವನ್ನು ಅಲಕ್ಷಿಸಿಬಿಡುವವರ ಚರಿತ್ರೆಯ ದಾಖಲಾತಿಯೂ ಆಗುತ್ತದೆ. ಆದರೆ ಇಂಥ ಕಥೆಗೆ ಲೇಖಕ ತರುವ ಕೊನೆ ಮಾತ್ರ ಹಾಸ್ಯಾಸ್ಪದ ಎನ್ನಿಸುವಂತಿದೆ. ಪ್ರಯಾಣದಲ್ಲಿ ತನಗೆ ಆ ಕಥೆ ಹೇಳಿದ ವ್ಯಕ್ತಿ ನಿಜವಾಗಿಯೂ ಆ ಟ್ರೈನಿನಲ್ಲಿದ್ದ ವ್ಯಕ್ತಿಯಾಗಿರಲೇ ಇಲ್ಲ, ಆ ಬರ್ಥ್ ನಲ್ಲಿ ಯಾರೂ ಟಿಕೆಟ್ ಪಡೆದು ಪ್ರಯಾಣಿಸಿರಲೇ ಇಲ್ಲ ಎಂದು ಅಚ್ಚರಿಯನ್ನು ಲೇಪಿಸಲು ನಿರೂಪಕ ಯತ್ನಿಸುತ್ತಾನೆ. ಚರಿತ್ರೆಯ ವಿವರಗಳ ನೆರವಿನಿಂದಲೇ ಒಂದು ಗಾಢವಾದ ಅನುಭವವನ್ನು ಉಳಿಸಬಹುದಾಗಿದ್ದ ಈ ಕಥೆಯನ್ನು ಇಂಥ ಥ್ರಿಲ್ಲೊಂದರ ಆಸೆಗೆ ಬೀಳಿಸಬೇಕಿತ್ತೇ?

ಇಂಥ ಮತ್ತೊಂದು ಕಥೆ “ಪಿರಮಿಡ್ಡಿನ ಗರ್ಭದಲ್ಲಿ”. ಇಲ್ಲಿ ಕೂಡ ರಾಜಕುಟುಂಬವೊಂದರ ಹುಳುಕುಗಳನ್ನು ಕಾಣಿಸಲಾಗಿದೆ. ಆದರೆ ಕಥೆ ಹೇಳಿದ ವೈದ್ಯನನ್ನು ನಿಗೂಢತೆಯ ತೆರೆಯ ಹಿಂದೆ ಇಡುವುದು ಅನವಶ್ಯಕವಾಗಿತ್ತು ಎಂದೇ ಅನ್ನಿಸುತ್ತದೆ. ಸ್ವಲ್ಪ ಸೂಕ್ಷ್ಮ ಕುಶಲತೆ ತೋರಿಸಿದ್ದರೆ, ಈ ಕಥೆಯ ವೈದ್ಯನನ್ನು, “ಶಾಲಭಂಜಿಕೆ”ಯ ಕಥೆ ಹೇಳುವ ವ್ಯಕ್ತಿಯ ಪಾತ್ರಗಳನ್ನು ಚರಿತ್ರೆ ಮತ್ತು ವರ್ತಮಾನವನ್ನು ಬೆಸೆಯುವ ಕೊಂಡಿಗಳಂತೆ ತೋರಿಸುವುದು ಸಾಧ್ಯವಿತ್ತು. “ಶಿಲಾವ್ಯೂಹ” ಎಂಬ ಕಥೆಯಲ್ಲಿ ಇದು ಕೊಂಚ ಮಟ್ಟಿಗೆ ಸಾಧ್ಯವಾದಂತಿದೆ. ಆ ಸಾಧ್ಯತೆಯಿಂದ ಈ ಎರಡೂ ಕಥೆಗಳು ತಪ್ಪಿಸಿಕೊಂಡಿವೆ.

ಇವುಗಳ ನಡುವೆ, “ಎದೆಯಾಳದಿಂದೆದ್ದ ಗೋವು” ನಿಜಕ್ಕೂ ಎದೆಗಿಳಿಯುವ ಕಥೆ. ಸೋಮನಾಥಪುರದ ಎಲ್ಲ ಗಂಡುಶಿಲ್ಪಗಳ ಎದೆಯಲ್ಲೂ ಸೂಕ್ಷ್ಮವಾಗಿ ಅವಲೋಕಿಸಿದರೆ ಬಸವನ ಮುಖ ಕಾಣುವುದರ ಹಿಂದಿನ ರಹಸ್ಯದ ಬಗ್ಗೆ ಇರುವ ಕಥೆ ಇದು. ಇವುಗಳ ಶಿಲ್ಪಿ ಮೂಲತಃ ಗೊಲ್ಲರವನಾಗಿದ್ದು, ಶಿಲ್ಪಿಯ ಮಗನಾಗಿ ಬೆಳೆಯುತ್ತಾನೆ. ತನ್ನ ನಿಜವಾದ ತಾಯಿಯ ಬಗ್ಗೆ ತಿಳಿದಾಗ ಅವನೊಳಗೆ ಕೋಲಾಹಲವೇ ಉಂಟಾಗುತ್ತದೆ. ಅವನೆದೆಯೊಳಗಿನ ನೋವೇ ಅವನ ಪ್ರತಿ ಶಿಲ್ಪದಲ್ಲೂ ಹೀಗೆ ಎದೆಯಾಳದಿಂದೆದ್ದ ಗೋವಾಗುತ್ತದೆ. ತನ್ನ ಆ ಕಲೆಗಾರ ಮಗನ ಬಗ್ಗೆ ಆತನ ನಿಜವಾದ ತಾಯಿ ಇಟ್ಟುಕೊಂಡಿರುವ ಅಭಿಮಾನವನ್ನು ದಾಖಲಿಸುವ ವಿವರಗಳೂ ಕಥೆಯಲ್ಲಿ ಬರುತ್ತವೆ. ಹೀಗೆ ಈ ಕಥೆ ತಂತಾನೇ ಒಂದು ರೂಪಕವಾಗುತ್ತದೆ. ಕಥೆಯನ್ನು ಓದಿ ಮುಗಿಸಿದಾಗ, ಕಲೆಯ ಬೆರಗಿನ ಮುಂದೆ ವಿಜ್ಞಾನದ ಮನಸ್ಸು ಮಂಡಿಯೂರಿದಂತೆ ಕಾಣಿಸುತ್ತದೆ.

ಈ ಸಂಕಲನದ “ನಂಜಾದ ಮಧು”, “ಹುಲಿಯ ಮಡಿಲ ಹುಳು” ಮತ್ತು “ಪರಾಗತ್ಯಾಗ” ವಿಜ್ಞಾನ ಲೋಕದಲ್ಲಿನ ಭ್ರಷ್ಟತೆಯ ಕಡೆ ಗಮನ ಸೆಳೆಯುತ್ತವೆ. ವಿಜ್ಞಾನ ಭ್ರಷ್ಟರು ಮತ್ತು ಉಗ್ರರ ಕೈಗೆ ಸಿಕ್ಕರೆ ಎಂಥ ಅನಾಹುತಗಳಾದಾವು ಎಂಬುದನ್ನು ಯಾರೂ ಊಹಿಸಬಹುದು. ಅವರ ವಿರುದ್ಧ ಗೆಲ್ಲಬೇಕು ಎಂಬುದೂ ಸಹಜ. ಆದರೆ ಇವತ್ತಿನ ವೈಭವೀಕೃತ ಹೀರೋನ ಚಿತ್ರವನ್ನೇ ಉಳ್ಳಂಥ ಸಿನೆಮಾ ಶೈಲಿಯ ಕಥೆ ಹೇಳಲು ಗಣೇಶಯ್ಯ ಅವರಂಥವರು ತಮ್ಮ ಶಕ್ತಿ ವ್ಯಯಿಸಬೇಕೇ? ವಿಜ್ಞಾನ ಲೋಕದ ಅಗೋಚರ ಅಪಚಾರಗಳು ಹಾಗೂ ಅವುಗಳ ಕಾರಣದಿಂದಾಗಿ ಎದುರಾಗಬಹುದಾದ ಸವಾಲುಗಳು ಅಷ್ಟು ಸರಳವಾಗಿ ನಿಭಾಯಿಸುವಂಥವಾ? ಹಾಗೆಂದು ಗಣೇಶಯ್ಯನವರೂ ಒಪ್ಪುತ್ತಾರಾ? ಈ ಕಥೆಗಳ ಇನ್ನೊಂದು ಆಯಾಮವನ್ನು ಯೋಚಿಸಬಹುದಾಗಿದೆ ಎಂಬ ಕಾರಣಕ್ಕಾಗಿ ಈ ಪ್ರಶ್ನೆಗಳು. ಮತ್ತು, ಗಣೇಶಯ್ಯ ಅವರು ಇಂಥ ಸಾಧಾರಣ ಶೈಲಿಯ ಕಥೆಗಳಿಗೂ ಆಚೆ ಕೈಚಾಚಬಲ್ಲ ತಾಕತ್ತನ್ನುಳ್ಳವರು ಎಂದು ಕಂಡಿರುವುದರಿಂದಲೇ ಈ ಪ್ರಶ್ನೆಗಳು ಹೆಚ್ಚು ಅಗತ್ಯವೆಂದು ತೋರುತ್ತದೆ.

ಇದೇನೇ ಇದ್ದರೂ, “ಶಾಲಭಂಜಿಕೆ”ಯೆಂಬ  ಚೆಲುವಿನ ಹಿನ್ನೆಲೆಯಲ್ಲಿರುವ ಈ ಬದುಕಿನ ವೇದನೆಯನ್ನು ಕಂಡ ಕಥೆಗಾರ ಇಷ್ಟವಾಗುತ್ತಾನೆ. ಒಂದು ಕಾಲದ, ಒಂದು ಸಮಾಜದ, ಒಂದು ಜೀವದ ವೇದನೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅಂಥವರ ಮನಸ್ಸಿಗೆ ಮಾತ್ರ ಚರಿತ್ರೆ ನಾಟೀತು. ಅಂಥ ಮನಸ್ಸಿನವರು ತಾವೇ ಚರಿತ್ರೆಯ ತೀರಕ್ಕೆ ನಡೆದುಹೋಗುತ್ತಾರೆ ಕೂಡ. ಹಾಗಲ್ಲದವರ ವರ್ತಮಾನದೊಳಕ್ಕೆ ಚರಿತ್ರೆಯನ್ನು ಒಯ್ಯುವುದೆಂದರೆ, ಅದು ಚರಿತ್ರೆಯ ಕತ್ತು ಹಿಸುಕುವ ಕೆಲಸವಷ್ಟೇ ಆದೀತು. ಆದ್ದರಿಂದಲೇ ಚರಿತ್ರೆಯನ್ನು ಓದಿಸಲು “ಥ್ರಿಲ್ಲರ್” ಎಂಬ ಹಣೆಪಟ್ಟಿಯ ಹಂಗು ಖಂಡಿತ ಬೇಡ ಎಂದು ಹೇಳಬೇಕೆನ್ನಿಸುತ್ತದೆ.

ಹೊಸ ಕಾಲದ ಲೇಖಕಿಯರಲ್ಲಿ ಮಾದರಿಗಳು ಎಲ್ಲಿ?

ನವೆಂಬರ್ 7, 2007

agnikanyas.jpg

ಕೆ ಸತ್ಯನಾರಾಯಣ

ಪ್ಪತ್ತನೆ ಶತಮಾನವು ಮುಗಿಯಿತು. ಸ್ತ್ರೀವಾದ ಮತ್ತು ಸ್ತ್ರೀಸಂವೇದನೆಯ ಮಾತುಗಳನ್ನು ಕೇಳುತ್ತಾ, ಓದುತ್ತಾ ಕೂಡ ನಾವು ಕೆಲವು ದಶಕಗಳನ್ನು ಕಳೆದಿದ್ದೇವೆ. ಹೊಸ ಕಾಲದ ಹೆಂಗಸಿನಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ಹೊಸ ಕಾಲದ ಹೆಂಗಸೆಂದರೆ ಆಕೆಯೇನು ದೂರ ಲೋಕದ ಅದೃಶ್ಯ ಹೆಂಗಸಲ್ಲ. ನಾವೆಲ್ಲರೂ ನಮ್ಮ ನಮ್ಮ ಹೆಂಡತಿಯರಿಂದ, ತಂಗಿಯರಿಂದ, ಗೆಳತಿಯರಿಂದ, ಸಹೋದ್ಯೋಗಿಗಳಿಂದ, ಅತ್ತಿಗೆಯರಿಂದ, ಅತ್ತೆಯರಿಂದ ನಿರೀಕ್ಷಿಸುವುದಾದರೂ ಏನನ್ನು? ಈ ಎಲ್ಲ ನಿರೀಕ್ಷೆಗಳ, ಆಕಾಂಕ್ಷೆಗಳ ಸಾಕಾರ ರೂಪವಾಗಿ ನಮ್ಮ ಲೇಖಕಿಯರು, ಲೇಖಕರು ಸೃಷ್ಟಿಸುತ್ತಿರುವ ಪಾತ್ರ ಪ್ರಪಂಚವಾದರೂ ಎಂಥದು? ಈ ಪುಟ್ಟ ಟಿಪ್ಪಣಿ ಇಂತಹ ಪ್ರಶ್ನೆಗಳನ್ನು ಕುರಿತದ್ದು.

ಕಥನ ಸಾಹಿತ್ಯದಲ್ಲಿ, ವಿಶೇಷವಾಗಿ ಕಾದಂಬರಿ ಪ್ರಕಾರದಲ್ಲಿ ತುಂಬಾ ದೊಡ್ಡ ಪ್ರತಿಭೆಗಳಿಗೆ ಮನುಷ್ಯ ಸ್ವಭಾವದಲ್ಲಾಗುವ ಪಲ್ಲಟಗಳ ಕುರಿತು ನೋಡಬಲ್ಲ ಮುನ್ನೋಟವಿರುತ್ತದಂತೆ. ದಸ್ತೊವೆಸ್ಕಿ “Notes From Under Ground” ಬರೆದಾಗ ಇಪ್ಪತ್ತನೆ ಶತಮಾನದಲ್ಲಿ ರೂಪುಗೊಳ್ಳುವ ಆಧುನಿಕ ಮನುಷ್ಯನ ವಿಚಾರವಾದ ಒಳಿತು-ಕೆಡುಕುಗಳ ಸಂಘರ್ಷ, ಹಿಂಸೆಯ ಮೂಲಕ ನಮ್ಮ ಆದರ್ಶವನ್ನು ಸಾಧಿಸಿಕೊಳ್ಳಬಹುದೆ? ವೈಜ್ಞಾನಿಕ ಬೆಳವಣಿಗೆಯ ನಂತರ ನಮಗೆ ಸೂಕ್ತವಾಗಬಲ್ಲ ಧರ್ಮದ ಸ್ವರೂಪ ಯಾವುದು ಎಂಬ ಪ್ರಶ್ನೆಗಳನ್ನೆಲ್ಲ ಎದುರಿಸುತ್ತ ತನ್ನ ಪಾತ್ರಗಳನ್ನು ಕಡೆಯುತ್ತಾ ಹೋದ. ಈ ಪ್ರಮಾಣ್ದಲ್ಲಲ್ಲದಿದ್ದರೂ ನಮ್ಮಲ್ಲಿ ಕುವೆಂಪು, ಕಾರಂತರು ತಮ್ಮ ಹೂವಯ್ಯ, ಗುತ್ತಿ, ರಾಮಯ್ಯ, ಲಚ್ಚ -ಇಂತಹ ಪಾತ್ರಗಳ ಮೂಲಕ ಹೊಸ ಕಾಲದಲ್ಲಿ ನಿರ್ಮಾಣವಾಗುವ ವ್ಯಕ್ತಿಗಳ ರೂಪುರ್‍ಏಷೆಯ ಮುಂಗಾಣ್ಕೆಯನ್ನು ನಮಗೆ ಕೊಟ್ಟರು. ತದನಂತರದ ಲೇಖಕರು, ಈ ಮೂಲಮಾದರಿಗಳನ್ನು ಇಟ್ಟುಕೊಂಡು ತಮ್ಮ ತಮ್ಮ ಕಾಲದ, ಅನುಭವದ ಹಿನ್ನೆಲೆಯಲ್ಲಿ ಈ ಮೂಲ ಮಾದರಿಗಳಿಗೆ ವಿಸ್ತರಣೆ ನೀಡುತ್ತಾ ಹೋದರು. ಇಂತಹ ಐತಿಹಾಸಿಕ ಕೆಲಸವನ್ನು ಸ್ತ್ರೀಪಾತ್ರಗಳಿಗೆ ಸಂಬಂಧಪಟ್ಟ ಹಾಗೆ ತ್ರಿವೇಣಿಯವರು ಮಾಡಿದರೆನಿಸುತ್ತದೆ. ಹೊಸ ವಿದ್ಯಾಭ್ಯಾಸ, ಉದ್ಯೋಗ, ಸ್ವಂತಿಕೆಯ ಹಂಬಲ ಇವೆಲ್ಲವೂ ಗಂಡಸು-ಹೆಂಗಸಿನ ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳನ್ನು, ತಂದೊಡ್ಡುವ ಸಮಸ್ಯೆಗಳನ್ನು ಅವರು ಜನಪ್ರಿಯ ಕಾದಂಬರಿಯ ಚೌಕಟ್ಟಿನೊಳಗೆ ಮಂಡಿಸುತ್ತಾ ಹೋದರು. ಅನಂತರದ ಲೇಖಕಿಯರು ಈ ಮೂಲಮಾದರಿಯನ್ನು ವಿಸ್ತರಿಸುತ್ತಿದ್ದಾರೆ, ಮಾರ್ಪಡಿಸುತ್ತಿದ್ದಾರೆ. ಸ್ತ್ರೀಯರ ಕಥಾಲೋಕದಲ್ಲಿ ನಮಗೆ ಹೂವಯ್ಯ, ಲಚ್ಚ, ಗುತ್ತಿ, ರಾಮನಂಥವರು ಸಿಕ್ಕಿದ್ದಾರೆಯೇ? ನನಗೆ ಗೊತ್ತಿಲ್ಲ.

ಹೆಂಗಸರ ಕಥಾಲೋಕದ “ಹೀರೋ” ಇನ್ನೂ ನಿರ್ಮಾಣವಾಗುತ್ತಿದೆ ಎಂದೇ ನನ್ನ ಭಾವನೆ. ಹೆಂಗಸಿನ ಹುಡುಕಾಟ ನಾನಾ ದಿಕ್ಕುಗಳಲ್ಲಿ ಹಂಚಿಹೋಗಿದೆ. ಲಾಗಾಯ್ತಿನಿಂದ ಬಂದ ಪಾಲನಾ ಪ್ರವೃತ್ತಿಯನ್ನು ಅವಳ ಸ್ವಭಾವ ನಿರಾಕರಿಸುವುದಿಲ್ಲ. ಹೊಸ ಕಾಲದ ಒತ್ತಡದಿಂದ ಮೂಡಿಬರುವ ವೃತ್ತಿಪರತೆ, ಸ್ವಂತಿಕೆಯ ಹಂಬಲವನ್ನು ಕೂಡ ಅವಳು ಕೈಬಿಡುವ ಹಾಗಿಲ್ಲ. ತನ್ನ ದೇಹದಲ್ಲಿರುವ ಕಾಮದ ಸ್ವಚ್ಛಂದತೆಯನ್ನು ಕೂಡ ಅವಳು ಗುರುತಿಸಬೇಕು. ಇವೆಲ್ಲವನ್ನೂ ಒಳಗೊಳ್ಳುವ ಹೆಂಗಸು ನಮ್ಮ ಸಮಾಜದಲ್ಲಿಯೇ ಇನ್ನೂ ನಿರ್ಮಾಣಗೊಂಡಿಲ್ಲವಾದ್ದರಿಂದ, ಸಾಹಿತ್ಯ ಕೃತಿಗಳಲ್ಲಿ, ಕಥನ ಸಾಹಿತ್ಯದಲ್ಲಿ ಸಿಕ್ಕಿಬಿಡಬೇಕು ಎಂದು ನಿರೀಕ್ಷಿಸುವುದು ಅಷ್ಟೊಂದು ಸೂಕ್ತವಲ್ಲವೇನೊ.

ಸ್ವತಃ ಕತೆಗಾರನಾಗಿ, ಕಾದಂಬರಿಕಾರನಾಗಿ ಕೂಡ ನಾನು ಈ ಸಮಸ್ಯೆಯನ್ನು ಎದುರಿಸಿದ್ದೇನೆ. ಹೆಂಗಸರ ಪಾಲನಾ ಪ್ರವೃತ್ತಿಯನ್ನು ಸೂಚಿಸುವಂಥ ಹಳೆಯ ತಲೆಮಾರಿನ ಹೆಂಗಸು, ಅಜ್ಜಿಯರ ಪಾತ್ರವನ್ನು ಸೃಷ್ಟಿಸಿದಾಗ ಸಾಮಾನ್ಯವಾಗಿ ಎಲ್ಲರೂ ಅಂಥ ಪಾತ್ರಗಳನ್ನು ಭಾವನಾತ್ಮಕವಾಗಿ ಒಪ್ಪುತ್ತಾರೆ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಆತ್ಮಾನುಕಂಪದಿಂದ ಪ್ರತಿ ಕ್ಷಣವೂ ಕೊರಗುವ ಪಾತ್ರಗಳನ್ನು ಸೃಷ್ಟಿಸಿದಾಗಲೂ ಓದುಗರು ಸಂತೋಷಪಡುತ್ತಾರೆ. ೧೯೯೨ರಲ್ಲಿ ನಾನು ಪ್ರಕಟಿಸಿದ “ಗೌರಿ” ಕಾದಂಬರಿಯ ನಾಯಕಿ ಮನೆಗೆಲಸದವಳು. ಕಾದಂಬರಿಯಲ್ಲಿ ಅವಳು ಸಾಹಿತ್ಯಕೃತಿಯ ಪಾತ್ರವೊಂದರಂತೆ ಮೂಡಿಬರದೆ ನಿಜಜೀವನದ ವ್ಯಕ್ತಿಯೊಬ್ಬರ ತದ್ರೂಪಿನಂತೆ ಮೂಡಿಬಂದದ್ದರಿಂದ ಆಕೆಯ ತಿಳಿವಳಿಕೆ, ಚಟುವಟಿಕೆ, ಪ್ರತಿಭಟನೆ ಎಲ್ಲವೂ ಮೆಲುದನಿಯಲ್ಲಿ ನಡೆಯಿತು. ಅದೊಂದು ರೀತಿಯಲ್ಲಿ ಬಿಡುಗಡೆಯೇ ಇಲ್ಲದ ಸ್ಥಿತಿಯ ವರ್ಣನೆ. ಆದರೂ ಇದು ಓದುಗರಿಗೆ ಇಷ್ಟವಾಯಿತು. ಈಚಿನ “ಕಾಲಜಿಂಕೆ” ಕಾದಂಬರಿಯಲ್ಲಿ ನಾನು ಸೃಷ್ಟಿಸಿದ ಪ್ರಾರ್ಥನಾ ಎನ್ನುವ ಹೊಸ ಕಾಲದ ತರುಣಿಯ ಪಾತ್ರ ಇದಕ್ಕಿಂತ ತೀರಾ ಭಿನ್ನವಾದ್ದು. ಈಕೆ ತರುಣಿ, ಸೂಕ್ಷ್ಮಜ್ಞೆ, ಆತ್ಮನಿರೀಕ್ಷೆಯಿರುವವಳು. ಪ್ರೀತಿಸಬಲ್ಲಳು, ಪ್ರತಿಭಟಿಸಬಲ್ಲಳು, ಹಿಂದಿನ ಪೀಳಿಗೆಯನ್ನು ವಿಮರ್ಶಿಸುತ್ತಲೂ ಸಹಾನುಭೂತಿ ತೋರಬಲ್ಲಳು. ತನ್ನ ವ್ಯಕ್ತಿತ್ವದ ಹುಡುಕಾಟದಲ್ಲಿ ಸ್ವತಃ ತಂದೆ ತಾಯಿಗಳನ್ನು ಅಲ್ಲದೆ, ಈ ಕಾಲದ ಎಲ್ಲ ಸಾಮಾಜಿಕ-ರಾಜಕೀಯ ಪ್ರಶ್ನೆಗಳನ್ನು ಕೂಡ ಒಳಗೊಳ್ಳಬಲ್ಲಳು. ಅವಳಲ್ಲಿ ಭಾವತಿವ್ರತೆಯಿದೆ, ಕನಸುಗಾರಿಕೆಯಿದೆ, ಒತ್ತಾಸೆಯಿದೆ. ಇದೆಲ್ಲದರ ಜೊತೆಗೆ ಅದೀಗ ತಾನೆ ತನ್ನ ದೇಹದಲ್ಲಿ ಅರಳುತ್ತಿರುವ ಯೌವನದ, ಚೈತನ್ಯದ ಅರಿವೂ ಇದೆ. ಈಕೆ, ಇವಳಂಥವಳು ನಮ್ಮ ಕಾಲದಲ್ಲಿ ನಿರ್ಮಾಣಗೊಳ್ಳಬಹುದಾದ, ನಿರ್ಮಾಣಗೊಳ್ಳಲೇಬೇಕಾದ ಹೆಂಗಸಿನ ಮೂಲ ಮಾದರಿಯಾಗಿರಬಹುದು. ಆದರೆ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ, ಈಕೆ ಸಂಕೀರ್ಣಳಾಗಿ ಸಂವೇದನಾಶೀಲವಾಗಿ ಕಂಡರೂ ಮೂಲಭೂತವಾಗಿ ಇಂತಹ ಪಾತ್ರ ಕನ್ಪನೆಯೇ ರೋಮ್ಯಾಂಟಿಕ್ ಆದದ್ದು, ಆದರ್ಶೀಕರಣಗೊಂಡದ್ದು! ಏಕೆಂದರೆ ನಮ್ಮ ಕಾಲದಲ್ಲೇ, ನಮ್ಮೆದುರಿಗೇ ಮೇಧಾ ಪಾಟ್ಕರ್, ಕಿರಣ್ ಮುಜುಂದಾರ್, ಸುಧಾಮೂರ್ತಿ ಇವರೆಲ್ಲ ಇರುವಂತೆ ಜಯಲಲಿತ, ರಾಬ್ಡಿದೇವಿ, ಮೋನಿಕಾಬೇಡಿ, ಕಿರಣ್ ಬೇಡಿ, ಸಾಲುಮರದ ತಿಮ್ಮಕ್ಕ, ಪ್ರತಿಭಾತಾಯಿ ಪಾಟೀಲ್ ಕೂಡ ಇದ್ದಾರೆ. ನಿಜ, ಇವರೆಲ್ಲರೂ ಒಂದೇ ಪಾತ್ರದಲ್ಲಿ, ಒಂದೇ ವ್ಯಕ್ತಿತ್ವದಲ್ಲಿ ಎರಕಗೊಳ್ಳಲಾರರು. ಆದರೆ ಒಂದು ಮಹತ್ವದ ಕೃತಿಯಲ್ಲಿ ಇವರೆಲ್ಲರೂ ಬೇರೆ ಬೇರೆ ದೃಷ್ಟಿಕೋನಗಳಾಗಿ, ಸಾಧ್ಯತೆಗಳಾಗಿ ಬಂದು ಒಬ್ಬರನ್ನೊಬ್ಬರು ಪರೀಕ್ಷಿಸುತ್ತಾ, ಪ್ರಚೋದಿಸುತ್ತಾ ಹೊಸ ಮೂರ್ತಿಯ, ಹೊಸ ಮೂಲ ಮಾದರಿಯ ಸೃಷ್ಟಿಗೆ ಕಾರಣರಾಗಬಹುದು. ಗಂಡಸಿನ ಪಾತ್ರ ಸೃಷ್ಟಿ ಕೂಡ ನಮ್ಮ ಕಥನ ಸಾಹಿತ್ಯದಲ್ಲಿ ಇನ್ನೂ ಆಗಬೇಕಾಗಿದೆ. ಇದೆಲ್ಲ ಕೇವಲ ಪಾತ್ರ ಸೃಷ್ಟಿಯ ಹಂಬಲದಿಂದ ಆಗುವಂಥದ್ದಲ್ಲ. ನಮ್ಮೆದುರಿಗಿನ, ನಮ್ಮ ಕಾಲದ ಪಲ್ಲಟಗಳ ನಾಡಿಮಿಡಿತ ಬಲ್ಲವರು ಮಾತ್ರ ಇಂತಹ ಸೃಷ್ಟಿಗೆ ಕೈಹಾಕಬಲ್ಲರು.

ಇವರೆಲ್ಲ ಇಡಿಯಾಗಿಯೇ, ಆಂಶಿಕವಾಗಿಯೇ, ನಮ್ಮ ಕುಟುಂಬದ ಸದಸ್ಯರಾಗೇ ಎದುರಾಗಿಬಿಟ್ಟರೆ, ನಮಗೆ ಎದುರಿಸುವ ಚೈತನ್ಯವಿರುವುದೇ ಇಲ್ಲ. ಇಂತಹುದೊಂದು ಚೈತನ್ಯ ಎದುರಾಗದಷ್ಟು ಜಾಣತನದಿಂದ ನಾವು ವರ್ತಿಸುತ್ತೇವೆ. ಅಂತಹ ಸಾಧ್ಯತೆಗಳನ್ನು ಚಿವುಟಿಹಾಕುತ್ತೇವೆ. ನಮ್ಮ ಹೆಣ್ಣುಮಕ್ಕಳಿಗೆ ನೀಡುವಷ್ಟು ಸ್ವಾತಂತ್ರ್ಯವನ್ನು, ನಾವು ನಮ್ಮ ಹೆಂಡತಿಯರಿಗೆ ನೀಡುವುದಿಲ್ಲ. ಮಗಳ ಬದಲಾವಣೆಗಳು ಸೂಕ್ಷ್ಮವಾಗಿ ಅರ್ಥವಾಗುವಷ್ಟು ಸೊಸೆಯ ಆಕಾಂಕ್ಷೆಗಳು ಅರ್ಥವಾಗುವುದಿಲ್ಲ.

ಈಚೆಗೆ ನನ್ನ ಗೆಳತಿಯೊಬ್ಬರು ನಡೆಸುತ್ತಿದ್ದ ಸ್ತ್ರೀವಾದಿ ಮಾಸಪತ್ರಿಕೆಯೊಂದು ನಿಂತುಹೋಯಿತು. ಆಕೆಯೇನು ಧೀರೋದಾತ್ತಳಲ್ಲ, ತ್ಯಾಗಮಯಿಯೂ ಅಲ್ಲ. ಮಧ್ಯಮವರ್ಗದ ಜೀವನದ ಎಲ್ಲ ಹಳವಂಡಗಳೂ ಅವಳ ಬದುಕಿನಲ್ಲಿದ್ದವು. ಮನೆಕೆಲಸ, ಆಫೀಸಿನ ಕೆಲಸ, ಸಂಘಟನೆಯ ಕೆಲಸ, ಪತ್ರಿಕೆಯ ಜವಾಬ್ದಾರಿ ಎಲ್ಲವೂ. ಇಪ್ಪತ್ತೈದು ವರ್ಷಗಳ ಹಿಂದೆ ಆಕೆಯ ಪತ್ರಿಕೆ ಪ್ರಾರಂಭವಾದಾಗ, ಮನೆಯಲ್ಲಿ ಒಂದು ವರ್ಷದ ಮಗು ಕಾಯುತ್ತಿದ್ದರೂ ಈಕೆ ಆಫೀಸು ಕೆಲಸ ಮುಗಿಸಿ, ಹಾದಿಯಲ್ಲಿ ಪತ್ರಿಕೆ ಅಚ್ಚಾಗುತ್ತಿದ್ದ ಮುದ್ರಣಾಲಯಕ್ಕೆ ಹೋಗಿ ನಂತರ ಮನೆಗೆ ಹೋಗುತ್ತಿದ್ದಳು. ಇದನ್ನೆಲ್ಲ ನೆನೆಯುತ್ತಾ ನಾನು ಆಕೆಯನ್ನು ಹೊಗಳಿದಾಗ ಅವಳು ಕೇಳಿದ್ದು ಒಂದೇ ಪ್ರಶ್ನೆ.

“ನಾನು ನಿಮ್ಮ ಕುಟುಂಬದ ಸದಸ್ಯೆಯಾಗಿದ್ದರೂ ನೀವು ಹೀಗೇ ಹೊಗಳುತ್ತಿದ್ದಿರಾ, ನನ್ನನ್ನು ಇದೇ ರೀತಿ ಬೆಳೆಯಲು ಬಿಡುತ್ತಿದ್ದಿರಾ?”

ಇಂತಹ ಪ್ರಶ್ನೆಗೆ ನಮ್ಮ ಅಂತರಂಗದಲ್ಲಿ ಕೊಟ್ಟುಕೊಳ್ಳುವ ಉತ್ತರಕ್ಕೆ ಮಾತ್ರ ಹೊಸ ಕಾಲದ ಹೊಸ ಹೆಂಗಸಿನ ಸ್ವರೂಪ ಮತ್ತು ಆಕೆ ಸಾಹಿತ್ಯಕೃತಿಯಲ್ಲಿ ಮತ್ತು ನಿಜ ಜೀವನದಲ್ಲಿ ನಿರ್ಮಾಣಗೊಳ್ಳುವಾಗ ಇರುವ ಕಷ್ಟಗಳು ಅರ್ಥವಾಗಬಲ್ಲದು.

ಬೀದಿಯ ಹೆಣ್ಣುಗಳ ತಳಮಳದ ಕಥೆಗಳು

ನವೆಂಬರ್ 4, 2007

ಕಾಯದ ಕಾರ್ಪಣ್ಯ
ಲೇ: ಕುಸುಮಾ ಶಾನಭಾಗ
ಪ್ರ: ಹೇಮಾಂಶು ಪ್ರಕಾಶನ, ದೃಶ್ಯ, ದೇರೆಬೈಲು, ಮಂಗಳೂರು-೫೭೫೦೦೬
ಬೆಲೆ: ೭೫ ರೂ. ಪುಟಗಳು: ೧೦೦

————————————–

ಶ್ರಾವಣಿ 

ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ ನೋವಿನ ಕಥೆಗಳಿಗೆ ಅವರು ಕೊಟ್ಟ ಅಕ್ಷರ ರೂಪವೇ “ಕಾಯದ ಕಾರ್ಪಣ್ಯ”.

ವೇಶ್ಯಾವೃತ್ತಿ ಪ್ರಾಚೀನತೆಯನ್ನು ಹೊಂದಿರುವಷ್ಟೇ ಕರಾಳತೆಯನ್ನೂ ಹೊಂದಿರುವಂಥದ್ದು. ಇವತ್ತಿನ ಸಮಾಜದಲ್ಲಿ ಎಂಥ ವಿಪರ್ಯಾಸವಿದೆಯೆಂದರೆ, ನಿರ್ಗತಿಕ ಹೆಣ್ಣುಮಗಳಿಗೆ ಇದು ವೃತ್ತಿಯಾಗಿರುವಾಗಲೇ ಶ್ರೀಮಂತಿಕೆಯ ಅಟ್ಟಹಾಸವಿರುವಲ್ಲಿ ಇದು ಸ್ವೇಚ್ಛೆಯ ಬಾಗಿಲು. ಬೀದಿಯ ಹೆಣ್ಣುಗಳ ಬದುಕಿನ ಕರಾಳತೆ ತಿಳಿಯಹೊರಟ ಕುಸುಮಾ ಅವರಿಗೆ ಕೂಡ ಸಮಾಜದ ಶ್ರೀಮಂತ ವರ್ಗದವರ ಇಂಥದೊಂದು ಹುಳುಕಿನ ದರ್ಶನವಾಯಿತೆಂಬುದು ಈ ಕೃತಿಯಲ್ಲಿ ಸೂಚ್ಯವಾಗಿ ಪ್ರಸ್ತಾಪವಾಗಿದೆ.

ಕುಸುಮಾ ಅವರು ಬೀದಿ ಹೆಣ್ಣುಮಕ್ಕಳ ಬದುಕನ್ನು ಆ ಪಾಪಕೂಪದಿಂದ ಎತ್ತಿ, ಅವರಿಗಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಹೊರಟಿದ್ದವರು. ಇಪ್ಪತ್ತು ವರ್ಷಗಳ ಹಿಂದೆ ನಡೆಸಿದ ಈ ಯತ್ನದಲ್ಲಿ ಅವರು ಕಂಡದ್ದು ಸೋಲು; ಮತ್ತು ಎದುರಿಸಿದ್ದು ಇದನ್ನೆಂದಿಗೂ ಬದಲಿಸಲು ಸಾಧ್ಯವಿಲ್ಲ ಎಂಬ ಕಟು ಸತ್ಯ.

ಅನಿವಾರ್ಯ ಸ್ಥಿತಿಯಲ್ಲಿ ಬೀದಿಗಿಳಿದ ಹೆಣ್ಣುಮಗಳು ಮತ್ತೆ ಆ ವಿಷಚಕ್ರದಿಂದ ಹೊರಬರಲಾರದ ಹಂತವನ್ನು ಮುಟ್ಟಿಬಿಡುತ್ತಾಳೆ; ಮೊದಲು ದುಡ್ಡಿಗಾಗಿ ಎಂದುಕೊಂಡದ್ದು ಆಮೇಲೆ ದುಡ್ಡಿನ ಜೊತೆಗೇ ಚಟವೂ ಆಗಿಬಿಡುತ್ತದೆ ಎಂಬ ವಿವರಗಳು ಕುಸುಮಾ ಅವರು ಕೇಳಿದ ಬೀದಿ ಹುಡುಗಿಯರ ಕಥೆಗಳಲ್ಲಿ ಬರುತ್ತವೆ. ವೇಶ್ಯೆಯರ ಕಥೆಗಳನ್ನು – ಅವುಗಳಲ್ಲಿ ಸೇರಿಕೊಂಡಿರಬಹುದಾದ ಸುಳ್ಳುಗಳ ಬಗೆಗೆ ಅನುಮಾನವಿಟ್ಟುಕೊಂಡೂ – ಹಲವು ಮನಸ್ಸುಗಳಿಗೆ ದಾಟಿಸುತ್ತದೆ ಈ ಕೃತಿ.

ಇಲ್ಲಿ ಕಥೆ ಹೇಳಿಕೊಂಡವರು ಸಮಾಜದ ಪ್ರಧಾನ ಧಾರೆಯೆಂಬುದು ತಮ್ಮನ್ನು ಹೇಗೆ ತುಚ್ಛವಾಗಿ ನೋಡುತ್ತದೆ ಎಂಬ ಕಟು ವಾಸ್ತವದ ಮುಂದೆ ಕಂಗೆಟ್ಟವರಾಗಿದ್ದಾರೆ. ಒಂದು ಹಂತದಲ್ಲಿ ಇದೆಲ್ಲ ಸಾಕಾಗಿ ಕೂಲಿಯನ್ನಾದರೂ ಮಾಡಿಕೊಂಡು ಬದುಕಲು ಹೊರಟು ಅಲ್ಲೂ ತಮ್ಮನ್ನು ಸೂಳೆಯೆಂದೇ ನೋಡುವ ಕಣ್ಣುಗಳ ಮುಂದೆ ಜರ್ಜರಿತರದವರಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈ ಸಮಾಜ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಸಿಟ್ಟಿನಲ್ಲಿ ಪ್ರಶ್ನೆ ಎತ್ತಿದವರಿದ್ದಾರೆ.

ಈ ಕೃತಿಯಲ್ಲಿನ ಹಲವು ಕಥೆಗಳ ನಡುವೆ, ಬೀದಿಯ ಹುಡುಗಿಯೊಬ್ಬಳು ನಿತ್ಯ ಡೈರಿ ಬರೆವ ರೂಢಿ ಇಟ್ಟುಕೊಂಡಿದ್ದಳೆಂಬ ವಿವರವಂತೂ ಮಿಂಚಿನಂತೆ ಸೆಳೆಯುತ್ತದೆ. ಆ ಮಿಂಚಿನ ಒಂದು ಕ್ಷಣದಲ್ಲಿ ಗೋಚರವಾಗುವ ಕತ್ತಲ ಲೋಕದ ಕರಾಳ ಮುಖ ಮಾತ್ರ ಮೈನಡುಗಿಸುವಂಥದ್ದು. ಆ ಹುಡುಗಿಯ ತಳಮಳದ ದಾಖಲಾತಿಗಳ ಒಂದು ತುಣುಕನ್ನು ಇಲ್ಲಿ ಗಮನಿಸುವುದರೊಂದಿಗೆ, ಅದನ್ನು ನಮ್ಮವರೆಗೆ ತಲುಪಿಸಿದ ಈ ಕೃತಿಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಬಹುದು:

“ಗೂಂಡಾಗಳಿಂದ ತಪ್ಪಿಸಿಕೊಳ್ಳುವುದು ನಮಗೆ ಯಾರಿಗೂ ಸುಲಭವಲ್ಲ. ಯಾರು ಗೂಂಡಾಗಳು ಎಂದು ಗುರುತಿಸುವುದು ಕಷ್ಟ. ಕೆಲವು ಸಲ ಮೆಜೆಸ್ಟಿಕ್ ಗೂಂಡಾಗಳು ರಿಚ್ ಮಂಡ್ ಸರ್ಕಲ್ ಕಡೆಗೆ ಬರುತ್ತಾರೆ, ಹುಡುಗಿಯರು ಬೇಕೂಂತ. ಆದರೆ ಗೂಂಡಾಗಳು ನಾವು ಓಡಾಡುವ ರಸ್ತೆಗಳಿಗೆ ಪೊಲೀಸರ ಕಣ್ಣು ತಪ್ಪಿಸಿ ಹಾಜರಾಗುತ್ತಾರೆ. ಎಷ್ಟೋ ಸಲ ಅವರು ಪೊಲೀಸರನ್ನೂ ಕ್ಯಾರ್ ಮಾಡೋದಿಲ್ಲ. ನನ್ನನ್ನು ಕೆಲವು ಹುಡುಗರು ಕರೆದರು. ಅವರು ದುಡ್ಡು ಕೊಡುವುದಿಲ್ಲವೆಂದು ನಾನು ಹೋಗಲು ಒಪ್ಪದೆ ಮಾರ್ಕ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಗೆ ತಿರುಗಿಕೊಂಡೆ. ಕಾರಿನಲ್ಲಿ ಎಂ.ಜಿ. ರೋಡಿನಿಂದ ಬಂದ ಈ ಹುಡುಗರು ನನ್ನನ್ನು ಎತ್ತಿ ಕಾರೊಳಗೆ ಹಾಕಿಕೊಂಡರು. ಕರೆದಾಗ ಬರಲಿಲ್ಲವೆಂದು ಮುಖದ ಮೇಲೆ ಬ್ಲೇಡಿನಿಂದ ಗೀರಿದರು. ರಕ್ತ ಬರುತ್ತಿತ್ತು, ಒರೆಸಲೂ ಬಿಡಲಿಲ್ಲ. ಅಶ್ಲೀಲವಾಗಿ ಮಾತಾಡಿಕೊಂಡು ಕಬ್ಬನ್ ಪಾರ್ಕಿನೊಳಗೆ ಕರೆದುಕೊಂಡು ಹೋದರು. ಒಬ್ಬರಾದ ಮೇಲೆ ಒಬ್ಬರು ಉಪಯೋಗಿಸಿಕೊಂಡರು. ನನ್ನ ಬಟ್ಟೆಗಳನ್ನೆಲ್ಲಾ ಸುತ್ತಿ ಕಾರೊಳಗೆ ಹಾಕಿಕೊಂಡು ನನ್ನನ್ನು ಅಲ್ಲೇ ಬಿಟ್ಟು ಹೋಗಿಬಿಟ್ಟರು. ನಾನು ಕಿರುಚಿಕೊಂಡೆ. ಗೋಗರೆದೆ. ಕೇಳಲಿಲ್ಲ. ಮೈ ಮೇಲೆ ಬಟ್ಟೆಯೇ ಇಲ್ಲ. ಬೆಳಗಾದರೆ ಜನ ತಿರುಗಾಡುತ್ತಾರೆ. ದಿಕ್ಕು ತೋಚದಂತೆ ಆಯಿತು.

“ಇನ್ನೂ ಬೆಳಕಾಗಿರಲಿಲ್ಲ. ಪೊಲೀಸರು ಹೋಗುತ್ತಿರುವುದು ನೋಡಿದೆ. ಅವರನ್ನು ಜೋರಾಗಿ ಕರೆದೆ. “ಅಣ್ಣಾ, ಗೂಂಡಾಗಳು ಹೀಗೆ ಮಾಡಿವೆ. ಮೈ ಮೇಲೆ ಬಟ್ಟೆಯಿಲ್ಲ. ಮನೆಗೆ ಹೋಗಬೇಕು, ಸ್ವಲ್ಪ ಸಹಾಯ ಮಾಡಣ್ಣ.” ಪೊಲೀಸರಲ್ಲೂ ಒಳ್ಳೆಯವರಿರುತ್ತಾರೆ. ಬೆಡ್ ಶೀಟ್ ತಂದುಕೊಟ್ಟರು. ಆಟೋ ಮಾಡಿಕೊಟ್ಟು, ಡ್ರೈವರನಿಗೆ ನನ್ನನ್ನು ಮನೆಗೆ ಬಿಡುವಂತೆ ಹೇಳಿದರು. ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ದೇವರನ್ನು ಬೇಡಿಕೊಂಡೆ. ನಾನು ದೇವರ ಪೂಜೆ ಮಾಡುವಾಗೆಲ್ಲಾ ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ಪ್ರಾರ್ಥಿಸುತ್ತೇನೆ. ನಾವು ಸೂಳೆಯರೇ ಇರಬಹುದು. ಹಾಗೇಂತ ಮೈಮೇಲೆ ಬಟ್ಟೆಯಿಲ್ಲದೆ ರಸ್ತೆಯಲ್ಲಿ ಓಡಾಡಲಿಕ್ಕಾಗುತ್ತಾ?”

ಸ್ವಪ್ನಲೋಕದ ಸಂಚಾರದಲ್ಲಿ ನಮ್ಮ ಹೊತ್ತಿನ ಧ್ಯಾನ

ಅಕ್ಟೋಬರ್ 27, 2007

jogi-boo.jpgಜೋಗಿ ಕಥೆಗಳು
ಲೇ: ಜೋಗಿ
ಪ್ರ: ಅಂಕಿತ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೦೭, ಬೆಲೆ: ೭೦ ರೂ.
————————————

 

 

ವಿಜಿ

ತ್ತರ ಪ್ರದೇಶದಲ್ಲಿ ಪಾಂಡಾ ಅಂತೊಬ್ಬ ಮನುಷ್ಯ ತನ್ನನ್ನು ತಾನು “ದೂಸರಿ ರಾಧಾ” ಎಂದು ಹೇಳಿಕೊಂಡು ಓಡಾಡುತ್ತಾನೆ. ಸಾಧಾರಣದವನೇನೂ ಅಲ್ಲ. ಐಪಿಎಸ್ ಆಫೀಸರ್ ಆಗಿದ್ದವನು. ಹೆಣ್ಣಿನ ಉಡುಪು ಧರಿಸಿ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು, ಕೃಷ್ಣನ ಭಜನೆ ಮಾಡುತ್ತಾ ಕೆಲಸವನ್ನೇ ಮರೆತವನು. ಕಡೆಗೆ ಕೆಲಸವೂ ಹೋಯ್ತು. ಇವನೊಂದಿಗೆ ಏಗಲಾರದೆ ಹೆಂಡತಿ ಡಿವೋರ್ಸಿಗಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ಇವನನ್ನು ಮಾತ್ರ ಅದಾವುದೂ ಬಾಧಿಸಿಲ್ಲ. ಕೃಷ್ಣ ಜನ್ಮಾಷ್ಟಮಿ ಬಂದರೆ ರಾಧೆಯ ವೇಷದಲ್ಲಿ ಕೃಷ್ಣನನ್ನು ಪೂಜಿಸಿಕೊಂಡು, ಭಜನೆ ಹಾಡಿಕೊಂಡು, ವಿಚಿತ್ರವಾಗಿ ಕುಣಿದುಕೊಂಡು ಇದ್ದುಬಿಡುತ್ತಾನೆ.

ಜೋಗಿಯವರ “ಗೋವಿಂದ ವಿಠಲ” ಅನ್ನೋ ಕಥೆಯಲ್ಲಿ ಜೋಶಿ ಅಂತೊಂದು ಪಾತ್ರ ಬರುತ್ತದೆ. ಪರಮನಾಸ್ತಿಕ ಜೋಶಿ ಕೀರ್ತನೆಗಳ ಸಂಗ್ರಹಕ್ಕೆಂದು ಹೊರಟು ಅವುಗಳ ಮೋಡಿಗೆ ಕಿವಿಗೊಡುತ್ತಾ, ಅವು ತನ್ನನ್ನೇ ಕುರಿತಾಗಿವೆ ಎಂದು ವಿಚಿತ್ರ ಬಗೆಯಲ್ಲಿ ಅವುಗಳೊಂದಿಗೆ ತಾದಾತ್ಮ್ಯ ಸಾಧಿಸಿದವನು, ಕಡೆಗೆ ಕೃಷ್ಣನೆದುರು ಅವುಗಳನ್ನು ಹಾವಭಾವ ಬೆರೆಸಿ ಹಾಡಿಕೊಂಡು ಇದ್ದುಬಿಡುತ್ತ ಎಲ್ಲ ವಾಸ್ತವಕ್ಕೂ ಬೆನ್ನುಹಾಕುತ್ತಾನೆ. ಅವನನ್ನು ಸರಿಯಾಗಿ ವರ್ತಿಸುವಂತೆ ಕೇಳಬೇಕೆಂದು ಬಂದ ಆಧುನಿಕ ಧೋರಣೆಯ ಪಂಪಾಪತಿ, ಜೋಶಿಯ ಸ್ಥಿತಿ ಕಂಡು ಸ್ಟನ್ ಆಗಿಬಿಡುತ್ತಾರೆ; ಏನೋ ಒಂದು ಆಧ್ಯಾತ್ಮಿಕವಾದದ್ದು ಈಗಿನ್ನೇನು ಘಟಿಸಿಯೇಬಿಡುತ್ತದೆ ಎಂದು ಕಾಯುತ್ತಾರೆ.

ಪಾಂಡಾನದು ಸೋಗೊ ಹುಚ್ಚೊ ಎಂದು ಅನುಮಾನಿಸುತ್ತಿರಬೇಕಾದರೆ ಕಂಡಿದ್ದು ಈ ಜೋಶಿ. ಕಥೆಯೊಳಗೆ ಜೋಶಿಯನ್ನು ಹುಚ್ಚ ಅಂದುಕೊಳ್ಳುವ ಜನವಿದೆ. ಕೆಲಸದಿಂದ ತೆಗೆದುಹಾಕಬೇಕೆಂಬ ಒತ್ತಾಯಗಳಿವೆ. ಆದರೆ, ನಮ್ಮಂಥವರ ಪ್ರತಿನಿಧಿಯಂತಿರುವ ಪಂಪಾಪತಿ ಒಂದು ಹಂತದಲ್ಲಿ ಜೋಶಿಯನ್ನು ನೋಡುವ ಬಗೆ ಬೇರೆ. ಪಂಪಾಪತಿ ಈ ಜೋಶಿಯ ಸ್ಥಿತಿಯೊಂದಿಗೆ ಇನ್ವಾಲ್ವ್ ಆಗುವ ಹಂತದಲ್ಲಿ ಕಥೆ ಮುಗಿಯುತ್ತದೆ. ಇಲ್ಲಿ ನಾವೂ ಪಾಂಡಾನನ್ನು ಹೀಗೇ ನೋಡಬೇಕೇ ಎಂಬುದಲ್ಲ ಚಿಂತೆ. ಸಮಾಜದ ವಿಭ್ರಮೆ ಸಮಾಜವನ್ನು, ನಮ್ಮ ವಿಭ್ರಮೆ ನಮ್ಮನ್ನು ಯಾವುದೇ ಸೋಗಿನಲ್ಲಾದರೂ ಕಾಡೀತು ಎಂಬುದನ್ನು ನೆನಪಿಸಿಕೊಳ್ಳಲು ಜೋಶಿಯ ಜೊತೆ ಪಾಂಡಾನನ್ನು ಕೂರಿಸಬೇಕೆನ್ನಿಸುತ್ತದೆ. ಇದು ಹೋಲಿಕೆಯಲ್ಲ. ಯಾವುದೇ ಲೆಕ್ಕದಲ್ಲಿ ನೋಡಿದರೂ ಇವರ ನಡುವೆ ಅಂತರ ಜಾಸ್ತಿ ಇದೆ.

ಜೋಗಿಯವರ ಇಲ್ಲಿನ ಬಹುತೇಕ ಕಥೆಗಳು ಎದುರಿಸುವುದು ಇಂಥ ವಿಲಕ್ಷಣ ವ್ಯಕ್ತಿಗಳು ಮತ್ತು ಸಂದರ್ಭವನ್ನು. ವಾಸ್ತವದಲ್ಲಿ ನಾವು ಸಹಜವಾಗಿ ಎದುರಿಸಲಾರದ ಹಂತಗಳೊಂದಿಗೆ ಇಲ್ಲಿ ಮುಖಾಮುಖಿ ಸಂಭವಿಸುತ್ತದೆ, ಅದೂ ಬಹಳ ಸಲ ಸಹಜವೇ ಎಂಬಷ್ಟು ಸಲೀಸಾಗಿ. ಈ ಮುಖಾಮುಖಿಯ ನಂತರದ ತಲ್ಲಣ ಮತ್ತು ತವಕಗಳು ವಾಸ್ತವದ ನೆಲಕ್ಕೇ ವಾಪಸ್ಸು ಜಿಗಿದು ಅದೇ ಗುಂಗಿನಲ್ಲಿ ನಡೆಯತೊಡಗುತ್ತವೆ. ತರ್ಕದ ಸುಳಿದಾರಿಯ ಕಾಡು ಸುತ್ತುತ್ತ ಎಂಥದೋ ನಿಗೂಢದ ಶಿಖಾರಿಯಲ್ಲಿ ತೊಡಗಿದಂತಿದೆ ಇವು. ವಾಸ್ತವಕ್ಕೆ ಅಂಟಿಕೊಂಡಂತಿವೆ ಎಂದು ತೋರುವಂಥ, ಆದರೆ ಕೈಗೆ ನಿಲುಕದ ಅದಾವುದೋ ಆಚೆಗಿನ ಸ್ತರದ ಮನಸ್ಸಿನಲ್ಲಿ ಇವು ಒಂದು ಬಗೆಯ ಬೇಹುಗಾರಿಕೆ ನಡೆಸುತ್ತವೆ. ಆ ಮೂಲಕ ಕಥೆಗೆ ಇವತ್ತಿನ ನಿಲುವಿನಲ್ಲಿ ಹೊಸ ಪರಿಭಾಷೆಯನ್ನು ದಕ್ಕಿಸಿಕೊಳ್ಳಲು ತುಡಿಯುತ್ತವೆ.

ಮನುಷ್ಯ ಸತ್ಯದ ತೆಕ್ಕೆಗೆ ಬರುವುದು ಮಂಪರಿನಲ್ಲಿ ಮಾತ್ರ. ದೇವನೂರರ ಕಥೆಯಲ್ಲಿ ದಲಿತನೊಬ್ಬ ಕುಡಿದ ಮತ್ತಿನಲ್ಲೇ ತನ್ನ ಧಣಿಯ ಬಗ್ಗೆ, ಆತನೊಂದಿಗಿನ ತನ್ನ ಹೆಂಡತಿಯ ಹಾದರದ ಬಗ್ಗೆ ಪ್ರತಿಭಟಿಸುತ್ತಾನೆ. ರವಿ ಬೆಳಗೆರೆಯವರೂ, ಸಾರಿಗೆ ಸಂಸ್ಥೆ ನೌಕರನೊಬ್ಬ ಬಸ್ಸುಗಳ ಬಗ್ಗೆ ಮಾಹಿತಿ ಕೊಡಲಿಕ್ಕಿರುವ ಮೈಕನ್ನು ತನ್ನ ಸುತ್ತಲಿನ ಯಾರೂ ಅರಗಿಸಿಕೊಳ್ಳಲಾರದ ಸತ್ಯ ಹೇಳುವುದಕ್ಕೆ ಬಳಸುವ ಆತನ ಭ್ರಮೆಯ ಸ್ಥಿತಿಯ ಬಗ್ಗೆ ಒಂದು ಕಥೆ ಬರೆದಿದ್ದಾರೆ. ಈ “ಅರಗಿಸಿಕೊಳ್ಳಲಾರದ ಸತ್ಯ” ಹೇಳುವವರೆಲ್ಲ ಸಮಾಜದ ಕಣ್ಣಿಗೆ ಹುಚ್ಚರಾಗಿಯೇ ಕಾಣುವ ತಮಾಷೆ, ಅದಕ್ಕಿಂತ ವಿಪರ್ಯಾಸದ ಬಗ್ಗೆಯೂ ಇಲ್ಲಿ ಗಮನಿಸಬೇಕು. ಈ ಮಂಪರು ಅಥವಾ ವಿಭ್ರಮೆ ನಮ್ಮ ಸದ್ಯದ ಸ್ಥಿತಿಗೆ ಮುಖಾಮುಖಿಯಾಗುತ್ತಲೇ ಇರುವ ಸಂಗತಿ. ಇದರ ಬಗ್ಗೆ ನಮಗೆ ಭಯ ಕೂಡ ಇದೆ. ಇದರಿಂದ ಆದಷ್ಟೂ ದೂರವಿರುವುದರಲ್ಲೇ ನಮ್ಮ ಎಚ್ಚರವೆಂಬುದು ತನ್ನನ್ನು ತಾನು ಸವೆಯಿಸಿಕೊಳ್ಳುತ್ತದೆ. ಹಾಗಿದ್ದೂ ಇದರ ಹಿಡಿತದಿಂದ ತಪ್ಪಿಸಿಕೊಂಡಿರುವುದು ಅಷ್ಟು ಸುಲಭವೇನಲ್ಲ.

ಜೋಗಿಯವರ ಈ ಕಥೆಗಳ ಜಗತ್ತು ಕೂಡ ಇಂಥದೊಂದು ಅರಗಿಸಿಕೊಳ್ಳಲಾರದ ಸತ್ಯದ ಕಡೆಗೆ ಬೆರಳು ತೋರಿಸುತ್ತದೆ. ನಾವು ನಿರಾಕರಿಸಲು ಮತ್ತೆ ಮತ್ತೆ ಯತ್ನಿಸಬಯಸುವುದರ ಬಗ್ಗೆ ಅದು ಕಾಣಿಸುವ ಸತ್ಯಗಳು ಅಕ್ಟೋಪಸ್ ವಾಸ್ತವದ ಹಾಗೆ ಕಾಣಿಸುತ್ತವೆ. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬ ನಿಷ್ಕರ್ಷೆಯ ದಡಕ್ಕೆ ತಂದು ಮುಟ್ಟಿಸಿ, ಹಲವಾರು ಪ್ರಶ್ನೆಗಳನ್ನು ನಮ್ಮೆದುರು ನಿರ್ಲಿಪ್ತ ಅನ್ನುವುದಕ್ಕಿಂತ ನಿರ್ದಯ ಮನೋಭಾವದಿಂದ ಇಡುತ್ತವೆ.

ಪ್ರಜಾಪ್ರಭುತ್ವದಲ್ಲಿ ಜನತೆಯ ಎದುರಲ್ಲೇ ನಡೆಯುತ್ತಿದೆ ಎಂಬಂತೆ ಕಾಣುವ ರಾಜಕಾರಣ ಜನತೆಯ ಪಾಲಿಗೆ ತನ್ನ ಧೂರ್ತ ಸತ್ಯಗಳ ಹಲವು ಬಾಗಿಲುಗಳನ್ನು ಮುಚ್ಚಿಯೇ ಇಟ್ಟಿರುತ್ತದೆ. ಜನ ಮಾತ್ರ ತನಗೆ ಕಾಣುತ್ತಿರುವ ಮಸುಕು ಮಸುಕು ಸಂಗತಿಗಳನ್ನೇ ಸತ್ಯ ಅಂದುಕೊಳ್ಳುತ್ತದೆ. ಅದೇ ಅದರ ವಿಭ್ರಮೆಯೂ ಆಗಿರುತ್ತದೆ. ಯಾರೂ ಘೋಷಿತ ನಿಲುವುಗಳನ್ನು ಸುಲಭವಾಗಿ ಬದಲಿಸಲಾರರು. ಬದಲಿಸಹೊರಟರೂ ಹಳೆಯದರ ಹಗ್ಗ ಕಾಲಿಗೆ ಸುತ್ತದೇ ಇರದು. ಡ್ರೈವರನನ್ನು ಡ್ರೈವರನೆಂದು ಕರೆಯಬಾರದು ಎಂದು ಹೊರಟವನೊಬ್ಬ ತಮಾಷೆಗೆ ಸಿಲುಕುವುದನ್ನು ಜೋಗಿ ಇಲ್ಲಿನ ಒಂದು ಕಥೆಯಲ್ಲಿ ಕಾಣಿಸುತ್ತಾರೆ. ಕಥೆಯಲ್ಲಿ ಡ್ರೈವರನಂತೂ ತನ್ನ ಧಣಿ ತನ್ನನ್ನು ಹೆಸರು ಹಿಡಿದು ಕರೆದುದಕ್ಕಿಂತ ಡ್ರೈವರ್ ಎಂದು ಕರೆದಾಗಲೇ ನಿರಾಳವಾಗುತ್ತಾನೆ.

ಸಾವು ಮತ್ತು ಅದರ ಗಡಿಭಾಗದ ಗೊಂದಲಗಳು ಜೋಗಿ ಕಥೆಯಲ್ಲಿ ಮತ್ತೆ ಮತ್ತೆ ಮರಳುವ ಮತ್ತೊಂದು ಪ್ರಧಾನ ಅಂಶ. ಇತರರ ಸಾವಿನ ಬಗ್ಗೆ ಯೋಚಿಸುವಾಗ ನಾವು ನಮ್ಮ ಸಾವಿನ ಭಯದ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಸತ್ತವನು ಅವನಾ, ನಾನಾ ಎಂಬ ಭ್ರಮೆಯಲ್ಲಿ, ಬದುಕಿರುತ್ತಲೂ ಸಾಯುತ್ತಿರುತ್ತೇವೆ. ಸಾವಿನ ಕಾರಣದ ಸಿಂಪಥಿಯಲ್ಲಿ ಹುಟ್ಟಿಕೊಳ್ಳಬಹುದಾದ “ಪುರಾಣ” ಎಂಥ ತಮಾಷೆಯದ್ದಾಗಿರಬಲ್ಲುದು ಎಂಬುದಕ್ಕೆ “ಹಾ! ಪ್ರಾಣಕಾಂತಾ!” ಕಥೆ ನಿದರ್ಶನವನ್ನು ಕೊಡುತ್ತದೆ.

ಕಥೆಯನ್ನು ಹೀಗೆಯೇ ಬರೆಯಬೇಕು ಎಂಬ ಹಂಗಿನರಮನೆಯ ಹೊರಗೆ ನಿಂತಿದ್ದಾನೆ ಕಥೆಗಾರ. ಸಹಜತೆಯೇ ಈ ಕಥೆಗಳಿಗೆ ಜೀವ ಕೊಟ್ಟಿದೆ. ಹಾಗಾಗಿಯೇ ಇಲ್ಲಿ ತೆರೆದುಕೊಂಡಿರುವ ಅವಕಾಶ ಕೂಡ ಕಾಲಾಂತರದ್ದು. ಯಾವತ್ತೂ ನಮ್ಮನ್ನು ಆಳುವ ಒಂದು ಬಗೆಯ ಕೈಮೀರಿದ ಸ್ಥಿತಿಯ ಬಗೆಗಿನ ಧ್ಯಾನದಲ್ಲಿ ಈ ಕಥೆಗಳು ನಡೆಯುತ್ತವೆ. ಈ ಅರ್ಥದಲ್ಲಿ ಸಂಕಲನದ ಮುಖಪುಟದಲ್ಲಿನ “ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!” ಎಂಬ ಮಾತಿಗೆ ಮಹತ್ವವಿದೆ.

ಇಂಥ ನಡಿಗೆಯ ಈ ಕಥೆಗಳು ಅನೇಕ ಸಲ ಜೀರ್ಣಿಸಕೊಳ್ಳಲಾರದ ತರ್ಕಗಳಲ್ಲೇ ಮುಗಿಯುವುದಿದೆ. ಅದು ಈ ಕಥೆಗಳ ಸಾಂಕೇತಿಕ ಸಂಧಾನವೊ, ದಾರಿ ತಪ್ಪಿಸಿಕೊಂಡಾಗಿನ ಅಸಹಾಯಕತೆಯೊ ಗೊತ್ತಿಲ್ಲ. ಆದರೆ ಈ ಕಥೆಗಳ ಯೋಗವೆಂದರೆ, ಅವೆರಡರಲ್ಲಿ ಯಾವುದೇ ಆಗಿದ್ದರೂ ಒಂದು ಅರ್ಥವನ್ನು ಆ ಮೂಲಕ ಹೊಳೆಯಿಸುವ ಕಣ್ಣು ಇಲ್ಲಿ ತೆರೆದುಕೊಳ್ಳುತ್ತದೆ. ಝೆನ್ ಕಥೆಗಳಲ್ಲಿ ಕಾಣಿಸುವಂಥ ಒಂದು ಮಿಂಚು ಇಲ್ಲಿ ಸ್ಲೋ ಮೋಷನ್ನಿನಲ್ಲಿ ಪ್ರತ್ಯಕ್ಷವಾಗುತ್ತಾ, ಆಯಿತು ಅಂದುಕೊಳ್ಳುವಾಗ ಇಲ್ಲವಾಗುತ್ತದೆ. ಹಾಗಾಗಿ, ಈ ಕಥೆಗಳ ಹೆಚ್ಚುಗಾರಿಕೆ ಇರುವುದೇ ಇವುಗಳ ಇದ್ದೂ ಇಲ್ಲದಂತಿರುವ ಶರೀರದಲ್ಲಿ; ಮನುಷ್ಯ ಸಮೂಹದಂತೆ ಕಾಣುವ ಆದರೆ ಅದರಾಚೆಗಿನ ಸ್ವಪ್ನಲೋಕದ ಸಂಚಾರದಲ್ಲಿ; ಹಾಗೂ ತಮ್ಮ ಕಣ್ಣುಗಳ ಮೂಲಕ ಮನುಷ್ಯಲೋಕದ ಸಂಚಾರವನ್ನು ನುಡಿಯಲು ನೆಲೆಯೊಂದನ್ನು ಕಟ್ಟಿಕೊಡುವುದರೆಡೆಗಿನ ಸಾಧ್ಯತೆಯಲ್ಲಿ.

ಅಂದಹಾಗೆ, ಮೊನ್ನೆ ಪಾಂಡಾನ ಹೆಂಡತಿಯ ಡಿವೋರ್ಸ್ ಅರ್ಜಿ ವಿಚಾರಣೆಯಿತ್ತು. ಆ ವೇಳೆ ಕೋರ್ಟಿಗೆ ಬಂದ ಪಾಂಡಾ, ಮೀಡಿಯಾದ ಮೈಕುಗಳ ಮುಂದೆ ಮಾತಾಡಿದ. “ಹೆಂಡತಿಯನ್ನು ಮನೇಲಿಟ್ಟುಕೊಳ್ಳೋಕ್ಕೆ ನನ್ನ ಅಭ್ಯಂತರವೇನಿಲ್ಲ. ಆದರೆ ಹೆಂಡತಿಯಾಗಿ ಅಲ್ಲ, ಮಗಳಾಗಿ” ಅನ್ನುತ್ತಿದ್ದ ಭೂಪ! ಜೋಗಿಯವರ ಕಥೆಗಳೊಳಗಿನ ವಿಲಕ್ಷಣರಲ್ಲೂ ಇಂಥ ಭಂಡರು ಸಿಗುವುದಿಲ್ಲ ಎಂಬುದೇ ನಾವು ಇವತ್ತು ಎದುರಿಸಬೇಕಾಗಿರುವ ಅನಿವಾರ್ಯ ಸವಾಲಾಗಿದೆ.

“ಸೂರ್ಯಗಂಧೀ ಧರಣಿ”ಯ ಹಾಡು

ಅಕ್ಟೋಬರ್ 23, 2007

chandrikanew.JPG

ಧುನಿಕ ಕಾವ್ಯದಲ್ಲಿ ಭೂಮಿ ಮತ್ತು ಚರಿತ್ರೆ ಎರಡು ಮಹತ್ವಪೂರ್ಣವಾದ ಆಶಯಗಳು. ವಾಸ್ತವವಾಗಿ, ಇವು ಕಾವ್ಯದ ಮುಖ್ಯ ಸಂಕಥನಗಳೂ ಹೌದು. “ಸೂರ್ಯಗಂಧೀ ಧರಣಿ”ಯಲ್ಲಿ ಕೂಡ “ಭೂಮಿ” ಮತ್ತು “ಚರಿತ್ರೆ” ಪ್ರತೀಕಗಳಾಗಿವೆ. ಇಲ್ಲಿನ ಕವಿತೆಗಳ ಸಂಕೀರ್ಣತೆ ಯಾವ ರೀತಿಯದ್ದೆಂದರೆ, ಭೂಮಿಯ ಬಗೆಗಿನ ಚಿಂತನೆಗಳು ಚರಿತ್ರೆಯ ಗ್ರಹಿಕೆಗೆ ನೆರವಾಗುವುದರೊಂದಿಗೆ, ಹೆಣ್ಣಿನ ಖಾಸಗಿ ಅನುಭವವನ್ನು ಅಭಿವ್ಯಕ್ತಿಸುವ ರೂಪಕಗಳೂ ಆಗಿಬಿಡುತ್ತವೆ. “ಭೂಮಿ” ತತ್ವದ ಗ್ರಹಿಕೆಯ ಮೊದಲನೆಯ ವಿಧಾನ ನವೋದಯ ಮತ್ತು ನವ್ಯದ ಮಾದರಿಯಾದರೆ, ಎರಡನೆಯದು ನವ್ಯೋತ್ತರ ಮಹಿಳಾ ಸಂವೇದನೆಗೆ ಸಂಬಂಧಿಸಿದ್ದು. ಇಲ್ಲಿನ ಕವಿತೆಗಳಲ್ಲಿ ನವೋದಯ ಮತ್ತು ನವ್ಯದ ಮಾದರಿ ಎಂಬ ಸರಳವಾದ ವಿಭಜನೆ ಸಾಧ್ಯವಿಲ್ಲ. ಈ ಎರಡೂ ಮಾದರಿಗಳ ಸಂಯೋಜನೆ, ಹೊಸದೊಂದು ಚಿಂತನೆಯ ಹೊರಚಾಚು ಆಗುವುದರತ್ತ ತುಯ್ಯುತ್ತದೆ. ಹೇಗೆಂದರೆ ನವೋದಯದ ವೈಯಕ್ತಿಕ ಅನುಭವ, ನವ್ಯದ ಸಾಮಾಜಿಕ ಅನುಭವವಾಗುವುದರತ್ತ (ಕೆ ಎಸ್ ನ ಮತ್ತು ಅಡಿಗರ ಕವಿತೆಗಳಂತೆ) ವಾಲುತ್ತದೆ. ಆ ವಾಲುವಿಕೆ ಇದ್ದಕ್ಕಿದ್ದಂತೆ ಚಿಪ್ಪಿನೊಳಗೆ ತಲೆ ಎಳೆದುಕೊಂಡು ನಿಂತುಬಿಡುತ್ತದೆ. ಈ ತುಯ್ದಾಟ, “ಸೂರ್ಯಗಂಧೀ ಧರಣಿ”ಯ ಹೆಚ್ಚಿನ ಕವಿತೆಗಳ ಲಕ್ಷಣವಾಗುವುದಲ್ಲದೆ, ಚಂದ್ರಿಕಾಳ ಆಯ್ಕೆ ಮತ್ತು ನಿಲುವುಗಳ ಸೂಚಕವೂ ಆಗಿದೆ.

ಬಿ ಯು ಸುಮಾ

ಜೋಗಿ ಕಥೆಗಳು

ಅಕ್ಟೋಬರ್ 22, 2007

jogi-boo.jpg

ಧುನಿಕ ಅನುಭವದ ವಿಚ್ಛಿದ್ರತೆಯನ್ನು ಪರಿಶೀಲಿಸುವ ಇಲ್ಲಿಯ ಕಥೆಗಳ ಹೊಸತನ ಮತ್ತು ಪ್ರಯೋಗಶೀಲತೆ ಒಮ್ಮೆಲೇ ಮನಸ್ಸನ್ನು ಸೆಳೆಯುತ್ತವೆ. ಕಥಾರಚನೆಯ ಮತ್ತು ಭಾಷಾ ಪ್ರಯೋಗದ ಅನೇಕ ಹೊಸ ಸಾಧ್ಯತೆಗಳು ಇಲ್ಲಿವೆ. ಹಲವು ವಾಸ್ತವಗಳು, ಹಲವು ಭ್ರಾಮಕಗಳು ಕೂಡಿ ಉಂಟಾದ ಈ ಜಗತ್ತು, ಒಂದು ಸಾಧ್ಯತೆಯಾಗಿ ನಮ್ಮೊಳಗೇ ಎಲ್ಲೋ ಅವಿತು ಕೂತಿದೆಯೇನೋ ಎಂಬ ತಲ್ಲಣವನ್ನೂ ಹುಟ್ಟಿಸುತ್ತದೆ. ಬಹು ಮುಖ್ಯವಾದುದೆಂದರೆ ಇವು ಕನ್ನಡದ ಒಳಗೇ ಹುಟ್ಟಿದ ಹೊಸ ರಚನೆಗಳು. ಹೀಗೆ ಭಾಷೆಯ ಹೊಟ್ಟೆಯಿಂದ ಬಂದ ಪ್ರಯೋಗಶೀಲತೆ ಮಾತ್ರ ಗಟ್ಟಿಯಾಗಿರುತ್ತದೆ ಹಾಗೂ ಕನ್ನಡ ಬದುಕಿನ ಹೃದಯವನ್ನು ಹಿಡಿಯಲು ಶಕ್ತವಾಗಿರುತ್ತದೆ.

ಕಿರುಗತೆಗಳಿಗೆ ಚುರುಕುತನ ಮಾತ್ರ ಇದ್ದರೆ ಸಾಲದು; ಜೊತೆಗೆ ಪರಿಣಿತ ಕಲೆಗಾರಿಕೆಯೂ ಬೇಕು. ಆ ಸಾಮರ್ಥ್ಯ ಇಲ್ಲಿಯ ಎಲ್ಲ ಕಥೆಗಳಲ್ಲೂ ಕಾಣುತ್ತದೆ. ಜೊತೆಗೆ ಕನ್ನಡ ಸಾಹಿತ್ಯ ಸ್ಮೃತಿಯಿಂದ ಹೆಕ್ಕಿದ, ಜೋಗಿಯವರಿಗೇ ವಿಶಿಷ್ಟವಾದ ಕೆಲವು ಪದ ಪ್ರಯೋಗಗಳು, ಪಾತ್ರಗಳು, ಹೆಸರುಗಳು, ಸಂದರ್ಭಗಳು ಇವೆ.

ಇವು ಆಯಾ ಕಥೆಯ ಹರವನ್ನು ಮಾತ್ರವಲ್ಲ, ಕೆಲವೊಮ್ಮೆ ಮೂಲದ ಪ್ರಸ್ತುತತೆಯನ್ನೂ ಹಿಗ್ಗಿಸುತ್ತವೆ. ಹಾಗಾಗಿ ಈ ಕಥೆಗಳ ಜೀವಜಾಲವು ಹಿಂದೆಲ್ಲೋ ಶುರುವಾಗಿ ಮುಂದೆಲ್ಲೋ ದೂರದವರೆಗೆ ಹರಡಿಕೊಂಡಿದೆ.

ವಿವೇಕ ಶಾನಭಾಗ