ಸಂಘರ್ಷ ಪರಂಪರೆಯ ಭವ

suri.jpgಎನ್ನ ಭವದ ಕೇಡು
ಲೇ: ಎಸ್ ಸುರೇಂದ್ರನಾಥ್
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೭೫ ರೂ. ಪುಟಗಳು: ೨೩೬

———————————–

 

ವಿಜಿ

ನ್ನದೊಂದು ಕೂದಲೆಳೆಯಿಂದಲೇ, ಬೀಳುತ್ತಿದ್ದ ಮರವನ್ನು ತಡೆದು ನಿಲ್ಲಿಸಿದ ಗಟ್ಟಿ ಹೆಂಗಸಿನ ಕಥೆ ಕೇಳಿಸಿಕೊಳ್ಳುತ್ತ ಬೆಳೆದ ನನ್ನಂಥವನಿಗೆ “ಎನ್ನ ಭವದ ಕೇಡು” ಕಾದಂಬರಿಯ ಲೋಕ ಹತ್ತಿರದ್ದು ಎನ್ನಿಸುತ್ತದೆ. ಇದನ್ನು ಇನ್ನೂ ಹತ್ತಿರ ತಂದುಕೊಳ್ಳುವುದಕ್ಕೆ, ಇದರೊಳಗೆ ನಡೆದಾಡಿಕೊಂಡು ಏನು ಎತ್ತ ಎಂದು ಹುಡುಕುವುದಕ್ಕೆ ಯಾವ ಮ್ಯಾಜಿಕ್ ರಿಯಲಿಸಮ್ಮಿನ ಹಂಗೂ ಬೇಕಾಗಿಲ್ಲ.

ರಮಿಸುವ ಧಾಟಿಗಿಂತ ಆಕ್ರಮಣಗೈಯುವ, ಎಲ್ಲವನ್ನೂ ಒಂದೇ ಪಟ್ಟಿಗೆ ಸೂರೆಗೈದುಬಿಡುತ್ತೇನೆ ಎಂಬಂತೆ ಕುದಿಯುವ, ಬಿರುಗಾಳಿಯಂತೆ ಅಬ್ಬರಿಸಿ ಬರುವ ಕಥೆಗಳಲ್ಲೇ ಸ್ವಂತಿಕೆಯೆಂಬುದು ಒಂದು ಗುಂಜಿಯಷ್ಟಾದರೂ ಜಾಸ್ತಿಯೇನೊ. ಹಾಗೆಂದು ಇದು ಬಂಡಾಯ ಚಳವಳಿಯ ಕಥನ ಮಾದರಿಯೇನಲ್ಲ; ಬದಲಾಗಿ, ಕಥೆಯ ಅಂತರಂಗದಲ್ಲೇ ಇರಬಹುದಾದ, ಹಾಗೆ ನೋಡಿದರೆ ಪ್ರತಿಯೊಬ್ಬ ಮನುಷ್ಯನೊಳಗೂ ಇರಬಹುದಾದ, ಅಷ್ಟೇ ಏಕೆ, ಮೂಕ ಪ್ರಾಣಿಗಳೊಳಗೂ ಇರಬಹುದಾದ ಒಂದು ಬಗೆಯ ಸ್ಫೋಟಕ ಗುಣ. ಉದ್ದಕ್ಕೂ ಸಿಟ್ಟನ್ನು ಎಲ್ಲೂ ಪ್ರಕಟಗೊಳಿಸದ ಕಥೆಯೊಂದು ತನ್ನ ಅಂತಃಶಕ್ತಿಯಿಂದಲೇ ಕೆಂಡದಂಥ ಬಂಡಾಯದ ಅಸಾಧಾರಣ ರೂಪಕವಾಗಿ ನಿಲ್ಲಬಲ್ಲದು. ಇಂಥವುಗಳ ದಾರಿಯಲ್ಲಿ “ಎನ್ನ ಭವದ ಕೇಡು” ಹೇಳುವ ಕಥೆ, ಒಂದಿಡೀ ಜೀವಮಾನದೊಳಗಿನ ಮೋಹ, ಮಮಕಾರ, ವ್ಯಗ್ರತೆ, ನಿಷ್ಠುರತೆ, ಸ್ವಪ್ರತಿಷ್ಠೆ, ಸ್ವಾಭಿಮಾನ, ಸೇಡು, ದಾಹ -ಇವೆಲ್ಲವನ್ನೂ ಕೂಡಿಸಿಕೊಂಡು ಮಳೆಗಾಲದ ಬೆಟ್ಟದ ಹೊಳೆಯಂತೆ ಕಾಣಿಸುತ್ತದೆ. ಬೆಟ್ಟದ ಹೊಳೆ ನೋಡಲು ಪುಟ್ಟದೆನ್ನಿಸಿದರೂ ಹಾಯಲಾರದ ಹೊಳೆ. ನೀರಿಳಿಯುವವರೆಗೂ ಕಾಯುವ ತಾಳ್ಮೆಯನ್ನು ಹೇಳಿಕೊಡುವ ಹೊಳೆ. “ಎನ್ನ ಭವದ ಕೇಡು” ಇಂಥದೊಂದು ಕಾಯುವಿಕೆಯಲ್ಲೇ ಕದಲುವ, ಕನಲುವ ಕಥೆ.

ಈ ಕಥೆಯೊಳಗೆ ಪ್ರವೇಶಿಸುತ್ತಿದ್ದಂತೆ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಮಾಮಿಯದು. ಆದರೆ, ಮಾಮಿಯ ಬದಲಾಗಿ ಸರಸ್ವತಿಯನ್ನು ಕೇಂದ್ರಪಾತ್ರವಾಗಿ ನೋಡುತ್ತ ಮುಂದುವರಿದರೆ ಹೇಗಿರುತ್ತದೆ ಎಂಬ ಕುತೂಹಲದೊಂದಿಗೆ ಈ ಕಥನದ ಹೆಜ್ಜೆ ಜಾಡನ್ನು ಕಂಡುಕೊಳ್ಳಬೇಕೆನ್ನಿಸುತ್ತದೆ ನನಗೆ. ಇಲ್ಲಿ ಮಾಮಿಯೇ ಎಲ್ಲವೂ ಅಲ್ಲ. ಅವಳಿಗೆ ಸಾವಿನ ವಾಸನೆ ಗೊತ್ತಾಗುತ್ತದೆ. ಆದರೆ ಅಡುಗೆ ಮನೆಯ ವಾಸನೆಯನ್ನೇ ಹಿಡಿದುಕೊಂಡು ಹುಟ್ಟಿ, ಅದರ ಸತತ ಸಹವಾಸದಲ್ಲೇ ಬೆಳೆದ ಸರಸ್ವತಿಯ ಜೀವನ್ಮುಖೀ ಗುಣ ನೇರವಾಗಿ ಮಾಮಿಗೆ ಕಡೆಯತನಕವೂ ಎದುರಾಗಿ ನಿಲ್ಲುವಂಥದ್ದು. ಸಾವಿನ ವಾಸನೆ ಹಿಡಿದು ಯಾವ ಕ್ಷಣವೆಂದರೆ ಆ ಕ್ಷಣ ಹೊರಟುಬಿಡುವ ಮಾಮಿ, ಒಂದು ಹೊಸ ಜೀವ ಈ ಜಗತ್ತಿಗೆ ಬರುವಾಗ ಮಾತ್ರ ಉಪಸ್ಥಿತಳಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾದಂಬರಿಯೊಳಗಿನ ಇಂಥ ಎರಡು ಸಂದರ್ಭಗಳನ್ನು ನೋಡುವುದಾದರೆ, ಮೊದಲನೆಯದು, ರಾಧೆ ಹೆರುವ ಸಮಯದಲ್ಲಿನ ಮಾಮಿಯ ವಿಮುಖತೆ. ಆಗ ಹೊಸ ಜೀವವಾಗಿ ಜಗತ್ತಿಗೆ ಸರಸ್ವತಿಯ ಪ್ರವೇಶವಾಗುತ್ತದೆ. ಎರಡನೆಯದು, ಯಮುನೆಯ ಹೆರಿಗೆಯ ವೇಳೆ. ಈಗಲೂ ಮಾಮಿ ಇಲ್ಲ. ಏನೆಂದರೆ ಏನೂ ಗೊತ್ತಿಲ್ಲದ ಸರಸ್ವತಿಯೊಬ್ಬಳೇ ನಿಂತು ಹೆರಿಗೆ ಮಾಡಿಸುತ್ತಾಳೆ. ಅವಳ ಪವಾಡ ಸದೃಶ ಚಾಕಚಕ್ಯತೆಗೆ ಸ್ವತಃ ವೈದ್ಯನಾಗಿರುವ ಅಜಿತನೇ ಬೆರಗಾಗಿ ಹೋಗುತ್ತಾನೆ. ಹೆಜ್ಜೆ ಹೆಜ್ಜೆಗೂ ತನಗೆ ವಿಷ ಹಾಕಲು ಹವಣಿಸುತ್ತಿದ್ದಾರೆ ಎಂದು ಆತಂಕಗೊಳ್ಳುವ ಮಾಮಿ ಸಾವಿನ ಭಯದಲ್ಲೇ ಬದುಕುತ್ತಿದ್ದಾಳೇನೋ ಎನ್ನಿಸುತ್ತದೆ. ಅದೇ ಹೊತ್ತಿಗೆ, ತನ್ನ ಆಕಾಂಕ್ಷೆಗಳ ಸಮೀಪ ಹೋಗುವುದಕ್ಕೆ ಸಾವಿನ ದಾರಿಯೇ ಆದರೂ ಸರಿ, ಅದನ್ನು ಬಳಸುವ ಜೀವನತೀವ್ರತೆ ಸರಸ್ವತಿಯದ್ದಾಗಿದೆ. ಮಗು ಹುಟ್ಟಿದರೆ ತಾನು ಸಾಯುತ್ತೇನೆ ಎಂಬ ಭಯದಿಂದಲೇ ಅದಕ್ಕೆ ವಿಮುಖಳಾಗುವ ಮಾಮಿ, ಇತ್ತ ಹೊಸ ಜೀವವನ್ನೂ ಸ್ವಾಗತಿಸಲಾರದೆ, ಅತ್ತ ಸಾವನ್ನೂ ದಿಟ್ಟತನದಿಂದ ಎದುರಿಸಲಾಗದೆ, ವಿಲಕ್ಷಣ ಅತಂತ್ರ ಸ್ಥಿತಿಯಲ್ಲಿ ಬೇಯುತ್ತಾಳೆ. ಸತ್ತೇಹೋಗಿದ್ದಾಳೆ ಎಂದೇ ಎಲ್ಲರೂ ಭಾವಿಸುವ ಹಾಗಿರುವ ಮರಣಮುಖಿ ಭಂಗಿಯಲ್ಲಿ ಇನ್ನೂ ಸಾಯದೇ ಉಳಿದಿರುವವಳು ಅವಳು. ಮಂತ್ರದಂಡವೇನೋ ಎಂಬಂತೆ ಕಾಣಿಸುವ ಅವಳ ಕೈಯಲ್ಲಿನ ಕೋಲೂ ಅಷ್ಟೆ. ಸರಸ್ವತಿಯನ್ನು ಜೀವ ಹೋಗುವ ಹಾಗೆ ಬಡಿಯಬಲ್ಲ ಆ ಕೋಲಿಗೆ, ಕೆಟ್ಟ ಮನಸ್ಸಿನವನಾದ, ವಿಷಸರ್ಪದಂತಿರುವ ಚಿನ್ನಸ್ವಾಮಿಯನ್ನು ಬಡಿದರೂ ಅವನ ದುಷ್ಟತನವನ್ನು ದಮನಗೊಳಿಸುವ ಶಕ್ತಿಯಿಲ್ಲ. ಹೀಗೆ ಇಡೀ ಕಥೆಯೇ ಜೀವನ್ಮರಣ ಹೋರಾಟ; ಸರಸ್ವತಿ ಮತ್ತು ಮಾಮಿಯ ಮಧ್ಯದ ಸಂಘರ್ಷ.

ಇನ್ನೂ ಒಂದು ಕಾರಣಕ್ಕಾಗಿ ಮಾಮಿಗಿಂತ ಸರಸ್ವತಿ ಮುಖ್ಯಳೆನ್ನಿಸುತ್ತಾಳೆ. ಅದು ಅವಳ ಕಣ್ಣೀರಿನ ಕಾರಣ. ಈ ಕಣ್ಣೀರಿನ ಮೂಲಕವೇ ಅವಳು ನಮ್ಮ ಮನೆಯ ಹುಡುಗಿಯಂತಾಗಿಬಿಡುತ್ತಾಳೆ. ಸಂಕಟ ಮಾತ್ರವಲ್ಲ, ಪ್ರತಿಭಟನೆಯೂ ಆಗಿ ಹರಿಯುತ್ತದೆ ಅವಳ ಕಣ್ಣೀರು. ಅದು ಮನೆಯನ್ನೆಲ್ಲ ತೋಯಿಸಿ ಹರಿಯುತ್ತ, ಹಿತ್ತಿಲಿನ ಕರಿಬೇವಿನ ಮರಕ್ಕೂ ನೀರುಣಿಸುತ್ತದೆ. ಹೀಗೆ ಯಾತನೆಯ ಪ್ರವಾಹವೊಂದು ಇಲ್ಲಿ ಪ್ರವಹಿಸುತ್ತದೆ.

ಸರಸ್ವತಿ, ಮಾಮಿಯ ಹಾಗೆ ತಾನು ಮೋಹಿಸಿದ್ದವನ ನೆನಪನ್ನು ಪೆಠಾರಿಯೊಳಗೆ ಹೂತಿಟ್ಟು ಕೂತಿರುವವಳಲ್ಲ. ತಾನು ಒಲಿದವನು ಈಗ ತನ್ನವನಲ್ಲ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಅವನೆಡೆಗೆ ತುಡಿಯುವವಳು, ಅವನಿಗೆ ಸೋಲುವವಳು. ಈ ಸೋಲಿನಲ್ಲೇ ಬದುಕಿನ ಗೆಲುವನ್ನು ಗಳಿಸಿ ನಳನಳಿಸುವವಳು. ಆದರೆ ಮಾಮಿ ಮಾತ್ರ, ಸರಸ್ವತಿಯನ್ನು ಸೋಲಿಸಬೇಕೆಂಬ ಹಠದಲ್ಲೇ ಮತ್ತೆ ಮತ್ತೆ ಹತಾಶೆಯ ಪ್ರವಾಹಕ್ಕೆ ಸಿಕ್ಕು ನಲುಗುವವಳು. ಗೆದ್ದೆನೆಂದುಕೊಂಡ ಮರುಕ್ಷಣದಲ್ಲೇ ಮತ್ತಷ್ಟು ಮುರುಟಿಹೋಗುವವಳು. ಅತ್ತ ಸರಸ್ವತಿ ತನ್ನ ಸ್ಫೋಟಕತೆಯಲ್ಲಿ, ಒಪ್ಪಿಸಿಕೊಳ್ಳುವಿಕೆಯಲ್ಲಿ, ಸ್ವೇಚ್ಛೆ ಎನ್ನಬಹುದಾದರೆ ಅಂಥ ಬಗೆಯಲ್ಲಿ ಸ್ವಪ್ನವನ್ನು ಮೀರುತ್ತ ಹೋದರೆ, ಇತ್ತ ಮಾಮಿ ತಾನೇ ತನಗೊಂದು ದುಃಸ್ವಪ್ನವಾದಳೇ?

ಕಾದಂಬರಿಯೊಳಗೆ ಹೆಂಗಸರ ಜಗತ್ತಿನ ಈ ಮುಖಾಮುಖಿ ಎಷ್ಟು ತೀವ್ರವಾಗಿದೆಯೆಂದರೆ, ದಾವಣಗೆರೆ ಮತ್ತು ಗೋವರ್ಧನರಾಯರ ಹೋಟೆಲ್ ಉದ್ಯಮದಂಥ ವ್ಯಾವಹಾರಿಕ ಪರಿಧಿ ಹಾಗೂ ಉನ್ಮಾದೀ ಕಳೆಯ ಬೃಂದಾವನ ಇವೆಲ್ಲ ಇಲ್ಲಿ ಒಂದು ನೆಪಕ್ಕಿವೆಯೇನೋ ಎನ್ನಿಸಿಬಿಡುತ್ತದೆ ಒಂದು ಹಂತದಲ್ಲಿ. ಪರಿಸ್ಥಿತಿಯ ವಿಲಕ್ಷಣ ವ್ಯೂಹದಲ್ಲಿ ಮಾಮಿಯ ಸವತಿಯಾಗಿ ರಾಧಾ ಬರುತ್ತಾಳೆ. ಯಮುನೆಯನ್ನು ನೋಡಲು ಬಂದವರು ಆಕೆಯ ತಂಗಿ ಸರಸ್ವತಿಯನ್ನು ಮೆಚ್ಚುತ್ತಾರೆ. ಸರಸ್ವತಿಯನ್ನು ಪ್ರೀತಿಸಿದ್ದವನು ಯಮುನೆಯನ್ನು ಮದುವೆಯಾಗಲು ಮುಂದಾಗುತ್ತಾನೆ. ತಂಗಿಯ ಪ್ರಿಯಕರನನ್ನು ತಾನು ಪಡೆದುಕೊಂಡೆನೆಂಬ ಗೆಲುವಿನ ಉನ್ಮಾದದಲ್ಲಿ ಯಮುನೆ ಮೆರೆಯುತ್ತಾಳೆ. ಮುಂದೆ ಅವರಿಬ್ಬರೂ ತನ್ನ ಕಣ್ತಪ್ಪಿಸಿ ಕೂಡುವುದು ತಿಳಿದು ಕುದಿಯುತ್ತಾಳೆ. ಮಾಮಿಯ ಮುಂದೆ ಸರಸ್ವತಿ ದಿಟ್ಟತನ ತೋರುತ್ತಾಳೆ. ಅವಳನ್ನು ಮಣಿಸಲು ಮಾಮಿ ಸದಾ ಹವಣಿಸುತ್ತಾಳೆ… ಹೀಗೆ ಬೃಂದಾವನದ ಅಂತರಂಗದೊಳಗೆ ನಿರಂತರ ಸ್ಫೋಟಗಳು. ಕಡೆಗೆ ಇಡೀ ಬೃಂದಾವನಕ್ಕೇ ದರಿದ್ರ ಹಿಡಿಯುತ್ತಿದೆ ಎಂಬ ಹಂತದಲ್ಲಿ, ಎದೆಯೊಳಗಿನ ದೀಪ ಆರದಂತೆ ಕಾಯಲು ಬಂದ ಒಳ್ಳೆಯ ಮನಸ್ಸಿನ ತರುಣ ವೈದ್ಯ ಅಜಿತ ಕೂಡ ಸೋತು ತನ್ನ ದಾರಿ ತಾನು ನೋಡಿಕೊಳ್ಳಬೇಕಾಗುತ್ತದೆ. ಬೃಂದಾವನದ ಅವನತಿಗೆ ದಾವಣಗೆರೆ ಸಾಕ್ಷಿಯಾಗುತ್ತದೆ.

ಇವೆಲ್ಲದರ ಮೂಲಕ ಸುರೇಂದ್ರನಾಥ್ ಅವರು ಕಟ್ಟಿಕೊಡುವ ಭವದ ಕೇಡಿನ ಕಥೆಯಲ್ಲಿ ಎರಡು ಪ್ರಧಾನವಾದ ರೂಪಕಗಳಿವೆ. ಒಂದು ಈ ಕಾದಂಬರಿಯ ಭಾಷೆ. ಇನ್ನೊಂದು ನಾಗಲಿಂಗಪುಷ್ಪದ ಘಮ. ಜೋಗಿಯವರು ಗುರುತಿಸುವ ಹಾಗೆ ಕಥೆ ಹೇಳುವುದು ಕೂಡ ಒಂದು ಪುಣ್ಯದ ಕೆಲಸ ಎಂಬಷ್ಟು ಶ್ರದ್ಧೆ ಇಲ್ಲಿ ತಾನೇ ತಾನಾಗಿ ನಡೆದಾಡಿದೆ. ಅದು ಬಸವರಾಜ ರಾಗಗಳನ್ನು ಬಿಡಿಸುತ್ತ ಸಾಗಿದ ಹಾಗೆ, ಆ ರಾಗದ ವಿಸ್ತಾರದಲ್ಲಿ ಗೋದಾವರಿ ತನ್ನನ್ನು ತಾನು ತನ್ಮಯವಾಗಿಸಿಕೊಳ್ಳುತ್ತ ಲೀನವಾಗುವ ಹಾಗೆ ಇದೆ. ಒಂದು ನಾದವನ್ನು, ಜೀವ ಸಾಧ್ಯತೆಯ ಲಯವನ್ನು ಗಳಿಸಿಕೊಳ್ಳುತ್ತ ಬೆಳೆಯುತ್ತ ಹೋಗುವ ಈ ಭಾಷೆ, ಕಥೆಗೊಂದು ಜಾನಪದ ಬೆರಗನ್ನು ಹಚ್ಚಿದೆ. ಭಾಷೆಯೇ ಒಂದು ರೂಪಕವಾಗುವ ಪರಿ ದೇವನೂರರ “ಕುಸುಮಬಾಲೆ”ಯಲ್ಲೂ ಇತ್ತು.

ಕಥೆಯಲ್ಲಿ ನಾಗಲಿಂಗಪುಷ್ಪದ ಘಮ ಕೂಡ ಅಸಾಧಾರಣ ರೂಪಕವಾಗಿ ಬಿತ್ತರಗೊಳ್ಳುತ್ತದೆ. ಭವದ ಉದ್ದೀಪನವನ್ನು ಸಾರುತ್ತ ಹರಡಿಕೊಳ್ಳುವ ನಾಗಲಿಂಗಪುಷ್ಪದ  ಘಮ ಮತ್ತು ಅದರ ನೇರಳೆ ಬೆಳಕಿಗೂ ದಾವಣಗೆರೆ ಸಾಕ್ಷಿಯಾಗುತ್ತದೆ. ಬೃಂದಾವನದೊಳಗೆ ಈ ನಾಗಲಿಂಗಪುಷ್ಪದ ಘಮ ಮೊದಲು ಅಡರಿಕೊಂಡದ್ದು ಮಾಮಿ ಮತ್ತು ಗೊವರ್ಧನರಾಯರ ಮೈಗಳು ಬೆಸೆದುಕೊಳ್ಳುತ್ತ, ಸೃಷ್ಟಿಗೆ ಅಣಿಯಾಗುವ ಮುನ್ನವೇ ಬೇರೆಯಾದ ದಿನ. ಎರಡನೇ ಬಾರಿಗೆ, ಗೋವರ್ಧನರಾಯರು ಮತ್ತು ರಾಧಾ ಸುಖದ ನಿಮಿಷಗಳನ್ನು ಉಣ್ಣತೊಡಗಿದಾಗ. ಅನಂತರವೆಲ್ಲ ನಾಗಲಿಂಗಪುಷ್ಪದ ಗಂಧಕ್ಕೆ ಕಾರಣವಾದದ್ದು ಸರಸ್ವತಿಯ ದೈಹಿಕ ತಹತಹ.

ರಾಧೆಯ ಸಾವಿನ ಬೆನ್ನಲ್ಲೇ, ಅವಳು ಆಸೆಪಟ್ಟು ಬೆಳೆದಿದ್ದ ನಾಗಲಿಂಗಪುಷ್ಪದ ಎರಡು ಗಿಡಗಳನ್ನು ಮಾಮಿ ಬೇರುಸಹಿತ ಕೀಳಿಸಿಹಾಕುತ್ತಾಳೆ. ಮುಂದೆ ಸರಸ್ವತಿಯ ಕಾರಣದಿಂದಾಗಿ ನಾಗಲಿಂಗಪುಷ್ಪದ ಘಮ ಮೂಡತೊಡಗಿದಾಗಲೂ ಎಲ್ಲಾದರೂ ನಾಗಲಿಂಗಪುಷ್ಪದ ಕುಡಿ ಉಳಿದುಕೊಂಡಿದೆಯೇ ಎಂದು ಹುಡುಕುತ್ತಾಳೆ. ಆದರೆ ಅವಳೆಷ್ಟು ಹುಡುಕಿದರೂ ನಾಗಲಿಂಗಪುಷ್ಪದ ಕುಡಿ ಮಾತ್ರ ಅವಳ ಕಣ್ತಪ್ಪಿಸಿ ಉಳಿದುಕೊಂಡೇಬಿಡುತ್ತದೆ. ಕಡೆಯವರೆಗೂ, ಅವಳು ಸೊಂಟ ಮುರಿದುಕೊಂಡು ಬಿದ್ದು ಅಸಹಾಯಕತೆಯಲ್ಲಿ ಕೂಗಿಕೊಳ್ಳುವ ಸ್ಥಿತಿಯಲ್ಲೂ ನಾಗಲಿಂಗಪುಷ್ಪ ಅವಳ ಪಾಲಿಗೊಂದು ನಿವಾರಿಸಿಕೊಳ್ಳಲಾಗದ ವೈರಿಯಂತೆ ಕಾಡುತ್ತದೆ; ನಿನಗೆ ಸಿಗಲಾರೆ ಎಂಬಂತೆ ಅವಳನ್ನು ಇನ್ನಷ್ಟು ಅಸಹಾಯಕತೆಯ ಕುದಿಯಲ್ಲಿ ಬೇಯಿಸಿಬಿಡುತ್ತದೆ. ಮಾಮಿಗೆ ಸವಾಲಾಗಿಯೇ ಉಳಿದುಹೋದ ಸರಸ್ವತಿಯ ಹಾಗೆ.

ಸಂಘರ್ಷ ಪರಂಪರೆಯ ಭವದಲ್ಲಿ ಗೆದ್ದದ್ದು ನಾಗಲಿಂಗಪುಷ್ಪದ ಘಮವೇ?

Advertisements
Explore posts in the same categories: ಅಮೃತಕ್ಕೆ ಗರುಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: