ಎಲ್ಲ ಗದ್ದಲದ ಆಚೆಗೂ…

ಉಫೀಟ್…!
ಲೇ: ಚೇತನಾ ತೀರ್ಥಹಳ್ಳಿ
ಪ್ರ: ಇಬ್ಬನಿ ಭಾವಬಿಂದು, ೩೬೩೪, ೪ನೇ ಕ್ರಾಸ್, ಕೌಂಡಿನ್ಯ ಮೆಡಿಕಲ್ಸ್ ಸಮೀಪ, ಗಾಯತ್ರಿ ನಗರ, ಬೆಂಗಳೂರು-೨೧
ಬೆಲೆ: ೨೦ ರೂ. ಪುಟಗಳು: ೪೪

chetana_coverone5.jpg

* * *

ಚೇತನಾ ತೀರ್ಥಹಳ್ಳಿ ನನಗೆ ಪರಿಚಯವಿರುವುದು “ಪುರುಷಾಕಾರ”ವನ್ನು ಬೆಚ್ಚಿಸಬಲ್ಲ ಅವರ ಬರಹಗಳ ಮೂಲಕ. ಪುಟ್ಟ ಪುಟ್ಟ ಬರಹಗಳು ಅವು. ಕಾವ್ಯದ ಶಕ್ತಿಯೊಂದಿಗೆ ಕೆಲವೇ ಮಾತುಗಳಲ್ಲಿ ಮಾರ್ಮಿಕವಾಗಿ, ಆದರೆ ಬಲು ನಿರಾಯಾಸವಾಗಿ, ಹೇಳಬೇಕಾದ್ದನ್ನು ಹೇಳಿ ಮುಗಿಸಬಲ್ಲ ಸಹಜವಂತಿಕೆಯಿಂದ ಅವರ ಬರಹಗಳು ಗಮನ ಸೆಳೆಯುತ್ತವೆ. ಅವರು ಕವಿತೆಯನ್ನೂ ಬರೆಯುತ್ತಾರೆ ಎಂಬುದು ಗೊತ್ತಾದದ್ದೇ ಮೊನ್ನೆ.

ಅಳಲು, ಸಿಟ್ಟು ಮತ್ತು ಪ್ರತಿಭಟನೆಯನ್ನು ಹಾಹಾಗೇ ವ್ಯಕ್ತಪಡಿಸುವ ಯಾವುದೇ ಮನೆಯ ಹುಡುಗಿಯ ಹಾಗೆ ಚೇತನಾ ಅವರ ಅಭಿವ್ಯಕ್ತಿ. ಹಾಗಾಗಿಯೇ ಚೇತನಾ ಎಷ್ಟೋ ಸಲ ಗೋಳು ಮತ್ತು ಗೋಜಲುಗಳ ಕಥೆಗಳಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿದರೂ, ಅವರು ಹೇಳುತ್ತಿರುವುದು ಮಾತ್ರ ಹಲವು ಹುಡುಗಿಯರ ಕಥೆಯನ್ನು ಎಂಬುದೂ ನಿಚ್ಚಳ. ವೈಯಕ್ತಕ ಸಂಕಟಗಳ ಕತ್ತಲ ಕೋಣೆಯ ಬಾಗಿಲಿಂದಾಚೆಯೂ ನಿರುಕಿಸುವ ಧ್ಯಾನ ಅವರದು. ಅದರಿಂದ, ಒಂದಿಡೀ ಸಮುದಾಯದ ಆತ್ಮಕಥನವಾಗಲು ತವಕಿಸುವ ಮಿಂಚಿನ ಧಾರೆಗಳು ಕೂಡ ಅವರ ಬರಹಗಳಲ್ಲಿ ಗೋಚರವಾಗುತ್ತವೆ.

*

“ಹನ್ನೆರಡು ಮನೆ
ಕುಂಟೋಬಿಲ್ಲೆಯ ಹುಡುಗಿ
ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ,
ಆಟ ಸೋತಿದ್ದಾಳೆ.”

ಇಲ್ಲಿನ ಬಹುಪಾಲು ಕವಿತೆಗಳಲ್ಲಿ ಇರುವವರು ಹೀಗೆ “ಆಟ ಸೋತ” ಹುಡುಗಿಯರು. “ಬಲಗಾಲಿಟ್ಟು ಶುರುವಾಗುವ ಆಟ”ದಲ್ಲಿ ಸೋತವರು. ಇವರದೆಲ್ಲ “ನೋವುಗಳ ಬಗೆಬಗೆದು ಹೊರಗೆಳೆದು ಅಳು”ವ ಸ್ಥಿತಿ. ಹಾಗಿದ್ದೂ ಬೇರೆಯವರ ಅನುಕಂಪದ ನೋಟ ಇವರನ್ನು ಸಂತೈಸುವುದಿಲ್ಲ; ಬದಲಾಗಿ ಇನ್ನಷ್ಟು ತಲ್ಲಣಗೊಳಿಸುತ್ತದೆ. ನಿರ್ದಯಿ ಲೋಕದಲ್ಲಿ ನಗುವಾಗಿ ಅವತರಿಸುವ ಶಕ್ತಿವಂತೆಯರು ಇವರು.

“ಎಷ್ಟು ದಿನಗಳಾಗಿ ಹೋಗಿವೆ
ನನ್ನ ನೆರಳು ನೋಡಿ ನಾನು!”

ಹೆಣ್ಣೊಬ್ಬಳ “ಗೃಹಬಂಧನ” ಅವಸ್ಥೆಯನ್ನು ನಿರೂಪಿಸುವುದಕ್ಕೆ ಇದಕ್ಕಿಂತ ಬೇರೆ ಸಾಲುಗಳು ಬೇಕಿಲ್ಲವೇನೊ. ಒಂದು ನಿರೀಕ್ಷೆಯಿಂದ, ಸುಂದರ ಕನಸಿನಿಂದ ಶುರುವಾಗುವ ಬಾಳು ಯಾವ ಹಂತಕ್ಕೆ ಮುಟ್ಟಿದೆಯೆಂದರೆ, ಈಗ ಸೂರ್ಯನ ಮುಖ ನೋಡದೆ ದಿನಗಳು ಹುಟ್ಟುವುದು, ಮುಗಿದುಹೋಗುವುದು ಅಭ್ಯಾಸವೇ ಆಗಿಹೋಗಿದೆ.

ಇಂಥ ಹಲವು ಕಥನಗಳನ್ನು ಚೇತನಾ ಕವಿತೆಗಳು ನುಡಿಸುತ್ತವೆ. ಹಲವು ದಿಗ್ಭ್ರಮೆಗಳ ಮೊತ್ತವನ್ನು ಗಂಟು ಕಟ್ಟಿಕೊಂಡು ಸಾಗಿರುವ ಹುಡುಗಿಯರ ದನಿಯನ್ನು ಇವರ ಕವಿತೆಗಳ ತೀರದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.

ನನಗೆ ತುಂಬ ಇಷ್ಟವಾದ ಚೇತನಾ ಅವರ ಮತ್ತೊಂದು ಕವಿತೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಈ ಕವಿತೆಯಲ್ಲಿ ಅವರು, ಸಮಾಜದ ಪುರುಷ ಪ್ರಧಾನ ಧೋರಣೆಯನ್ನು ಅಣಕಿಸುವ ಬಗೆ ಬಲು ಸೂಕ್ಷ್ಮವಾಗಿದೆ. ಮಹಾದೇವಿ ಅಕ್ಕ ಆದದ್ದು, ಮೀರಾ ಸಂತಳೆನಿಸಿದ್ದು ನಿಜವಾಗಿಯೂ ಹೇಗೆ ಎಂಬ ಪ್ರಶ್ನೆಗಳನ್ನು ಈ ಕವಿತೆ ಉತ್ತರಿಸುತ್ತದೆ. ಅವರಿಬ್ಬರೂ ಕ್ರಮವಾಗಿ “ಕಲ್ಲು” ಚೆನ್ನಮಲ್ಲಿಕಾರ್ಜುನನನ್ನು, “ಗೊಂಬೆ” ಮಾಧವನನ್ನು ಗಂಡನೆಂದು ಬಗೆದರು. ಆದರೆ ಅವರ ಹಾಗೆಯೇ ಗಂಡನ್ನ ಬಿಟ್ಟು ಮತ್ತಾರನ್ನೋ ಗಂಡನೆಂದು ಬಗೆದ ಹೊಸ ಸಮಾಜದ ಹೆಣ್ಣುಮಗಳೊಬ್ಬಳು ಪಡೆದದ್ದು ಹಾದರಗಿತ್ತಿಯ ಪಟ್ಟ. ಯಾಕೆಂದರೆ, ಅವಳು ಗಂಡನೆಂದು ಧೇನಿಸಿದ್ದು ಕಲ್ಲನ್ನೊ, ಗೊಂಬೆಯನ್ನೊ ಆಗಿರಲಿಲ್ಲ; “ಸಜೀವ ಗಂಡಸಾಗಿದ್ದ!”

ಇದನ್ನು ಇನ್ನೂ ವಿವರಿಸುವುದು ಬೇಕಿಲ್ಲ. ಅಲ್ಲದೆ ಇದಕ್ಕಿಂತ ಹೆಚ್ಚಾಗಿ ನಾನಿಲ್ಲಿ ಚೇತನಾ ಅವರ ಕವಿತೆಗಳ ಭಾಗಗಳನ್ನು ಉದ್ಧರಿಸುವುದಕ್ಕೂ ಬಯಸುವುದಿಲ್ಲ. ಹೇಳಿಕೊಳ್ಳುವ, ಹೇಳುವ ತೀವ್ರತೆ ಅವರೊಳಗೆ ಗಾಢವಾಗಿದೆ ಎಂಬುದಷ್ಟೇ ಮುಖ್ಯವಾಗಿ ಕಂಡಿದೆ. ಈ ತೀವ್ರತೆಯೇ ಅವರನ್ನು ಮುನ್ನಡೆಸಬಲ್ಲುದು.

ವೆಂಕಟ್ರಮಣ ಗೌಡ 
(ಮುನ್ನುಡಿಯಿಂದ)

Advertisements
Explore posts in the same categories: ಫ್ರೆಷ್ ಪೇಜಸ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: