Archive for ಅಕ್ಟೋಬರ್ 2007

ಸ್ವಪ್ನಲೋಕದ ಸಂಚಾರದಲ್ಲಿ ನಮ್ಮ ಹೊತ್ತಿನ ಧ್ಯಾನ

ಅಕ್ಟೋಬರ್ 27, 2007

jogi-boo.jpgಜೋಗಿ ಕಥೆಗಳು
ಲೇ: ಜೋಗಿ
ಪ್ರ: ಅಂಕಿತ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೦೭, ಬೆಲೆ: ೭೦ ರೂ.
————————————

 

 

ವಿಜಿ

ತ್ತರ ಪ್ರದೇಶದಲ್ಲಿ ಪಾಂಡಾ ಅಂತೊಬ್ಬ ಮನುಷ್ಯ ತನ್ನನ್ನು ತಾನು “ದೂಸರಿ ರಾಧಾ” ಎಂದು ಹೇಳಿಕೊಂಡು ಓಡಾಡುತ್ತಾನೆ. ಸಾಧಾರಣದವನೇನೂ ಅಲ್ಲ. ಐಪಿಎಸ್ ಆಫೀಸರ್ ಆಗಿದ್ದವನು. ಹೆಣ್ಣಿನ ಉಡುಪು ಧರಿಸಿ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು, ಕೃಷ್ಣನ ಭಜನೆ ಮಾಡುತ್ತಾ ಕೆಲಸವನ್ನೇ ಮರೆತವನು. ಕಡೆಗೆ ಕೆಲಸವೂ ಹೋಯ್ತು. ಇವನೊಂದಿಗೆ ಏಗಲಾರದೆ ಹೆಂಡತಿ ಡಿವೋರ್ಸಿಗಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ಇವನನ್ನು ಮಾತ್ರ ಅದಾವುದೂ ಬಾಧಿಸಿಲ್ಲ. ಕೃಷ್ಣ ಜನ್ಮಾಷ್ಟಮಿ ಬಂದರೆ ರಾಧೆಯ ವೇಷದಲ್ಲಿ ಕೃಷ್ಣನನ್ನು ಪೂಜಿಸಿಕೊಂಡು, ಭಜನೆ ಹಾಡಿಕೊಂಡು, ವಿಚಿತ್ರವಾಗಿ ಕುಣಿದುಕೊಂಡು ಇದ್ದುಬಿಡುತ್ತಾನೆ.

ಜೋಗಿಯವರ “ಗೋವಿಂದ ವಿಠಲ” ಅನ್ನೋ ಕಥೆಯಲ್ಲಿ ಜೋಶಿ ಅಂತೊಂದು ಪಾತ್ರ ಬರುತ್ತದೆ. ಪರಮನಾಸ್ತಿಕ ಜೋಶಿ ಕೀರ್ತನೆಗಳ ಸಂಗ್ರಹಕ್ಕೆಂದು ಹೊರಟು ಅವುಗಳ ಮೋಡಿಗೆ ಕಿವಿಗೊಡುತ್ತಾ, ಅವು ತನ್ನನ್ನೇ ಕುರಿತಾಗಿವೆ ಎಂದು ವಿಚಿತ್ರ ಬಗೆಯಲ್ಲಿ ಅವುಗಳೊಂದಿಗೆ ತಾದಾತ್ಮ್ಯ ಸಾಧಿಸಿದವನು, ಕಡೆಗೆ ಕೃಷ್ಣನೆದುರು ಅವುಗಳನ್ನು ಹಾವಭಾವ ಬೆರೆಸಿ ಹಾಡಿಕೊಂಡು ಇದ್ದುಬಿಡುತ್ತ ಎಲ್ಲ ವಾಸ್ತವಕ್ಕೂ ಬೆನ್ನುಹಾಕುತ್ತಾನೆ. ಅವನನ್ನು ಸರಿಯಾಗಿ ವರ್ತಿಸುವಂತೆ ಕೇಳಬೇಕೆಂದು ಬಂದ ಆಧುನಿಕ ಧೋರಣೆಯ ಪಂಪಾಪತಿ, ಜೋಶಿಯ ಸ್ಥಿತಿ ಕಂಡು ಸ್ಟನ್ ಆಗಿಬಿಡುತ್ತಾರೆ; ಏನೋ ಒಂದು ಆಧ್ಯಾತ್ಮಿಕವಾದದ್ದು ಈಗಿನ್ನೇನು ಘಟಿಸಿಯೇಬಿಡುತ್ತದೆ ಎಂದು ಕಾಯುತ್ತಾರೆ.

ಪಾಂಡಾನದು ಸೋಗೊ ಹುಚ್ಚೊ ಎಂದು ಅನುಮಾನಿಸುತ್ತಿರಬೇಕಾದರೆ ಕಂಡಿದ್ದು ಈ ಜೋಶಿ. ಕಥೆಯೊಳಗೆ ಜೋಶಿಯನ್ನು ಹುಚ್ಚ ಅಂದುಕೊಳ್ಳುವ ಜನವಿದೆ. ಕೆಲಸದಿಂದ ತೆಗೆದುಹಾಕಬೇಕೆಂಬ ಒತ್ತಾಯಗಳಿವೆ. ಆದರೆ, ನಮ್ಮಂಥವರ ಪ್ರತಿನಿಧಿಯಂತಿರುವ ಪಂಪಾಪತಿ ಒಂದು ಹಂತದಲ್ಲಿ ಜೋಶಿಯನ್ನು ನೋಡುವ ಬಗೆ ಬೇರೆ. ಪಂಪಾಪತಿ ಈ ಜೋಶಿಯ ಸ್ಥಿತಿಯೊಂದಿಗೆ ಇನ್ವಾಲ್ವ್ ಆಗುವ ಹಂತದಲ್ಲಿ ಕಥೆ ಮುಗಿಯುತ್ತದೆ. ಇಲ್ಲಿ ನಾವೂ ಪಾಂಡಾನನ್ನು ಹೀಗೇ ನೋಡಬೇಕೇ ಎಂಬುದಲ್ಲ ಚಿಂತೆ. ಸಮಾಜದ ವಿಭ್ರಮೆ ಸಮಾಜವನ್ನು, ನಮ್ಮ ವಿಭ್ರಮೆ ನಮ್ಮನ್ನು ಯಾವುದೇ ಸೋಗಿನಲ್ಲಾದರೂ ಕಾಡೀತು ಎಂಬುದನ್ನು ನೆನಪಿಸಿಕೊಳ್ಳಲು ಜೋಶಿಯ ಜೊತೆ ಪಾಂಡಾನನ್ನು ಕೂರಿಸಬೇಕೆನ್ನಿಸುತ್ತದೆ. ಇದು ಹೋಲಿಕೆಯಲ್ಲ. ಯಾವುದೇ ಲೆಕ್ಕದಲ್ಲಿ ನೋಡಿದರೂ ಇವರ ನಡುವೆ ಅಂತರ ಜಾಸ್ತಿ ಇದೆ.

ಜೋಗಿಯವರ ಇಲ್ಲಿನ ಬಹುತೇಕ ಕಥೆಗಳು ಎದುರಿಸುವುದು ಇಂಥ ವಿಲಕ್ಷಣ ವ್ಯಕ್ತಿಗಳು ಮತ್ತು ಸಂದರ್ಭವನ್ನು. ವಾಸ್ತವದಲ್ಲಿ ನಾವು ಸಹಜವಾಗಿ ಎದುರಿಸಲಾರದ ಹಂತಗಳೊಂದಿಗೆ ಇಲ್ಲಿ ಮುಖಾಮುಖಿ ಸಂಭವಿಸುತ್ತದೆ, ಅದೂ ಬಹಳ ಸಲ ಸಹಜವೇ ಎಂಬಷ್ಟು ಸಲೀಸಾಗಿ. ಈ ಮುಖಾಮುಖಿಯ ನಂತರದ ತಲ್ಲಣ ಮತ್ತು ತವಕಗಳು ವಾಸ್ತವದ ನೆಲಕ್ಕೇ ವಾಪಸ್ಸು ಜಿಗಿದು ಅದೇ ಗುಂಗಿನಲ್ಲಿ ನಡೆಯತೊಡಗುತ್ತವೆ. ತರ್ಕದ ಸುಳಿದಾರಿಯ ಕಾಡು ಸುತ್ತುತ್ತ ಎಂಥದೋ ನಿಗೂಢದ ಶಿಖಾರಿಯಲ್ಲಿ ತೊಡಗಿದಂತಿದೆ ಇವು. ವಾಸ್ತವಕ್ಕೆ ಅಂಟಿಕೊಂಡಂತಿವೆ ಎಂದು ತೋರುವಂಥ, ಆದರೆ ಕೈಗೆ ನಿಲುಕದ ಅದಾವುದೋ ಆಚೆಗಿನ ಸ್ತರದ ಮನಸ್ಸಿನಲ್ಲಿ ಇವು ಒಂದು ಬಗೆಯ ಬೇಹುಗಾರಿಕೆ ನಡೆಸುತ್ತವೆ. ಆ ಮೂಲಕ ಕಥೆಗೆ ಇವತ್ತಿನ ನಿಲುವಿನಲ್ಲಿ ಹೊಸ ಪರಿಭಾಷೆಯನ್ನು ದಕ್ಕಿಸಿಕೊಳ್ಳಲು ತುಡಿಯುತ್ತವೆ.

ಮನುಷ್ಯ ಸತ್ಯದ ತೆಕ್ಕೆಗೆ ಬರುವುದು ಮಂಪರಿನಲ್ಲಿ ಮಾತ್ರ. ದೇವನೂರರ ಕಥೆಯಲ್ಲಿ ದಲಿತನೊಬ್ಬ ಕುಡಿದ ಮತ್ತಿನಲ್ಲೇ ತನ್ನ ಧಣಿಯ ಬಗ್ಗೆ, ಆತನೊಂದಿಗಿನ ತನ್ನ ಹೆಂಡತಿಯ ಹಾದರದ ಬಗ್ಗೆ ಪ್ರತಿಭಟಿಸುತ್ತಾನೆ. ರವಿ ಬೆಳಗೆರೆಯವರೂ, ಸಾರಿಗೆ ಸಂಸ್ಥೆ ನೌಕರನೊಬ್ಬ ಬಸ್ಸುಗಳ ಬಗ್ಗೆ ಮಾಹಿತಿ ಕೊಡಲಿಕ್ಕಿರುವ ಮೈಕನ್ನು ತನ್ನ ಸುತ್ತಲಿನ ಯಾರೂ ಅರಗಿಸಿಕೊಳ್ಳಲಾರದ ಸತ್ಯ ಹೇಳುವುದಕ್ಕೆ ಬಳಸುವ ಆತನ ಭ್ರಮೆಯ ಸ್ಥಿತಿಯ ಬಗ್ಗೆ ಒಂದು ಕಥೆ ಬರೆದಿದ್ದಾರೆ. ಈ “ಅರಗಿಸಿಕೊಳ್ಳಲಾರದ ಸತ್ಯ” ಹೇಳುವವರೆಲ್ಲ ಸಮಾಜದ ಕಣ್ಣಿಗೆ ಹುಚ್ಚರಾಗಿಯೇ ಕಾಣುವ ತಮಾಷೆ, ಅದಕ್ಕಿಂತ ವಿಪರ್ಯಾಸದ ಬಗ್ಗೆಯೂ ಇಲ್ಲಿ ಗಮನಿಸಬೇಕು. ಈ ಮಂಪರು ಅಥವಾ ವಿಭ್ರಮೆ ನಮ್ಮ ಸದ್ಯದ ಸ್ಥಿತಿಗೆ ಮುಖಾಮುಖಿಯಾಗುತ್ತಲೇ ಇರುವ ಸಂಗತಿ. ಇದರ ಬಗ್ಗೆ ನಮಗೆ ಭಯ ಕೂಡ ಇದೆ. ಇದರಿಂದ ಆದಷ್ಟೂ ದೂರವಿರುವುದರಲ್ಲೇ ನಮ್ಮ ಎಚ್ಚರವೆಂಬುದು ತನ್ನನ್ನು ತಾನು ಸವೆಯಿಸಿಕೊಳ್ಳುತ್ತದೆ. ಹಾಗಿದ್ದೂ ಇದರ ಹಿಡಿತದಿಂದ ತಪ್ಪಿಸಿಕೊಂಡಿರುವುದು ಅಷ್ಟು ಸುಲಭವೇನಲ್ಲ.

ಜೋಗಿಯವರ ಈ ಕಥೆಗಳ ಜಗತ್ತು ಕೂಡ ಇಂಥದೊಂದು ಅರಗಿಸಿಕೊಳ್ಳಲಾರದ ಸತ್ಯದ ಕಡೆಗೆ ಬೆರಳು ತೋರಿಸುತ್ತದೆ. ನಾವು ನಿರಾಕರಿಸಲು ಮತ್ತೆ ಮತ್ತೆ ಯತ್ನಿಸಬಯಸುವುದರ ಬಗ್ಗೆ ಅದು ಕಾಣಿಸುವ ಸತ್ಯಗಳು ಅಕ್ಟೋಪಸ್ ವಾಸ್ತವದ ಹಾಗೆ ಕಾಣಿಸುತ್ತವೆ. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬ ನಿಷ್ಕರ್ಷೆಯ ದಡಕ್ಕೆ ತಂದು ಮುಟ್ಟಿಸಿ, ಹಲವಾರು ಪ್ರಶ್ನೆಗಳನ್ನು ನಮ್ಮೆದುರು ನಿರ್ಲಿಪ್ತ ಅನ್ನುವುದಕ್ಕಿಂತ ನಿರ್ದಯ ಮನೋಭಾವದಿಂದ ಇಡುತ್ತವೆ.

ಪ್ರಜಾಪ್ರಭುತ್ವದಲ್ಲಿ ಜನತೆಯ ಎದುರಲ್ಲೇ ನಡೆಯುತ್ತಿದೆ ಎಂಬಂತೆ ಕಾಣುವ ರಾಜಕಾರಣ ಜನತೆಯ ಪಾಲಿಗೆ ತನ್ನ ಧೂರ್ತ ಸತ್ಯಗಳ ಹಲವು ಬಾಗಿಲುಗಳನ್ನು ಮುಚ್ಚಿಯೇ ಇಟ್ಟಿರುತ್ತದೆ. ಜನ ಮಾತ್ರ ತನಗೆ ಕಾಣುತ್ತಿರುವ ಮಸುಕು ಮಸುಕು ಸಂಗತಿಗಳನ್ನೇ ಸತ್ಯ ಅಂದುಕೊಳ್ಳುತ್ತದೆ. ಅದೇ ಅದರ ವಿಭ್ರಮೆಯೂ ಆಗಿರುತ್ತದೆ. ಯಾರೂ ಘೋಷಿತ ನಿಲುವುಗಳನ್ನು ಸುಲಭವಾಗಿ ಬದಲಿಸಲಾರರು. ಬದಲಿಸಹೊರಟರೂ ಹಳೆಯದರ ಹಗ್ಗ ಕಾಲಿಗೆ ಸುತ್ತದೇ ಇರದು. ಡ್ರೈವರನನ್ನು ಡ್ರೈವರನೆಂದು ಕರೆಯಬಾರದು ಎಂದು ಹೊರಟವನೊಬ್ಬ ತಮಾಷೆಗೆ ಸಿಲುಕುವುದನ್ನು ಜೋಗಿ ಇಲ್ಲಿನ ಒಂದು ಕಥೆಯಲ್ಲಿ ಕಾಣಿಸುತ್ತಾರೆ. ಕಥೆಯಲ್ಲಿ ಡ್ರೈವರನಂತೂ ತನ್ನ ಧಣಿ ತನ್ನನ್ನು ಹೆಸರು ಹಿಡಿದು ಕರೆದುದಕ್ಕಿಂತ ಡ್ರೈವರ್ ಎಂದು ಕರೆದಾಗಲೇ ನಿರಾಳವಾಗುತ್ತಾನೆ.

ಸಾವು ಮತ್ತು ಅದರ ಗಡಿಭಾಗದ ಗೊಂದಲಗಳು ಜೋಗಿ ಕಥೆಯಲ್ಲಿ ಮತ್ತೆ ಮತ್ತೆ ಮರಳುವ ಮತ್ತೊಂದು ಪ್ರಧಾನ ಅಂಶ. ಇತರರ ಸಾವಿನ ಬಗ್ಗೆ ಯೋಚಿಸುವಾಗ ನಾವು ನಮ್ಮ ಸಾವಿನ ಭಯದ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಸತ್ತವನು ಅವನಾ, ನಾನಾ ಎಂಬ ಭ್ರಮೆಯಲ್ಲಿ, ಬದುಕಿರುತ್ತಲೂ ಸಾಯುತ್ತಿರುತ್ತೇವೆ. ಸಾವಿನ ಕಾರಣದ ಸಿಂಪಥಿಯಲ್ಲಿ ಹುಟ್ಟಿಕೊಳ್ಳಬಹುದಾದ “ಪುರಾಣ” ಎಂಥ ತಮಾಷೆಯದ್ದಾಗಿರಬಲ್ಲುದು ಎಂಬುದಕ್ಕೆ “ಹಾ! ಪ್ರಾಣಕಾಂತಾ!” ಕಥೆ ನಿದರ್ಶನವನ್ನು ಕೊಡುತ್ತದೆ.

ಕಥೆಯನ್ನು ಹೀಗೆಯೇ ಬರೆಯಬೇಕು ಎಂಬ ಹಂಗಿನರಮನೆಯ ಹೊರಗೆ ನಿಂತಿದ್ದಾನೆ ಕಥೆಗಾರ. ಸಹಜತೆಯೇ ಈ ಕಥೆಗಳಿಗೆ ಜೀವ ಕೊಟ್ಟಿದೆ. ಹಾಗಾಗಿಯೇ ಇಲ್ಲಿ ತೆರೆದುಕೊಂಡಿರುವ ಅವಕಾಶ ಕೂಡ ಕಾಲಾಂತರದ್ದು. ಯಾವತ್ತೂ ನಮ್ಮನ್ನು ಆಳುವ ಒಂದು ಬಗೆಯ ಕೈಮೀರಿದ ಸ್ಥಿತಿಯ ಬಗೆಗಿನ ಧ್ಯಾನದಲ್ಲಿ ಈ ಕಥೆಗಳು ನಡೆಯುತ್ತವೆ. ಈ ಅರ್ಥದಲ್ಲಿ ಸಂಕಲನದ ಮುಖಪುಟದಲ್ಲಿನ “ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!” ಎಂಬ ಮಾತಿಗೆ ಮಹತ್ವವಿದೆ.

ಇಂಥ ನಡಿಗೆಯ ಈ ಕಥೆಗಳು ಅನೇಕ ಸಲ ಜೀರ್ಣಿಸಕೊಳ್ಳಲಾರದ ತರ್ಕಗಳಲ್ಲೇ ಮುಗಿಯುವುದಿದೆ. ಅದು ಈ ಕಥೆಗಳ ಸಾಂಕೇತಿಕ ಸಂಧಾನವೊ, ದಾರಿ ತಪ್ಪಿಸಿಕೊಂಡಾಗಿನ ಅಸಹಾಯಕತೆಯೊ ಗೊತ್ತಿಲ್ಲ. ಆದರೆ ಈ ಕಥೆಗಳ ಯೋಗವೆಂದರೆ, ಅವೆರಡರಲ್ಲಿ ಯಾವುದೇ ಆಗಿದ್ದರೂ ಒಂದು ಅರ್ಥವನ್ನು ಆ ಮೂಲಕ ಹೊಳೆಯಿಸುವ ಕಣ್ಣು ಇಲ್ಲಿ ತೆರೆದುಕೊಳ್ಳುತ್ತದೆ. ಝೆನ್ ಕಥೆಗಳಲ್ಲಿ ಕಾಣಿಸುವಂಥ ಒಂದು ಮಿಂಚು ಇಲ್ಲಿ ಸ್ಲೋ ಮೋಷನ್ನಿನಲ್ಲಿ ಪ್ರತ್ಯಕ್ಷವಾಗುತ್ತಾ, ಆಯಿತು ಅಂದುಕೊಳ್ಳುವಾಗ ಇಲ್ಲವಾಗುತ್ತದೆ. ಹಾಗಾಗಿ, ಈ ಕಥೆಗಳ ಹೆಚ್ಚುಗಾರಿಕೆ ಇರುವುದೇ ಇವುಗಳ ಇದ್ದೂ ಇಲ್ಲದಂತಿರುವ ಶರೀರದಲ್ಲಿ; ಮನುಷ್ಯ ಸಮೂಹದಂತೆ ಕಾಣುವ ಆದರೆ ಅದರಾಚೆಗಿನ ಸ್ವಪ್ನಲೋಕದ ಸಂಚಾರದಲ್ಲಿ; ಹಾಗೂ ತಮ್ಮ ಕಣ್ಣುಗಳ ಮೂಲಕ ಮನುಷ್ಯಲೋಕದ ಸಂಚಾರವನ್ನು ನುಡಿಯಲು ನೆಲೆಯೊಂದನ್ನು ಕಟ್ಟಿಕೊಡುವುದರೆಡೆಗಿನ ಸಾಧ್ಯತೆಯಲ್ಲಿ.

ಅಂದಹಾಗೆ, ಮೊನ್ನೆ ಪಾಂಡಾನ ಹೆಂಡತಿಯ ಡಿವೋರ್ಸ್ ಅರ್ಜಿ ವಿಚಾರಣೆಯಿತ್ತು. ಆ ವೇಳೆ ಕೋರ್ಟಿಗೆ ಬಂದ ಪಾಂಡಾ, ಮೀಡಿಯಾದ ಮೈಕುಗಳ ಮುಂದೆ ಮಾತಾಡಿದ. “ಹೆಂಡತಿಯನ್ನು ಮನೇಲಿಟ್ಟುಕೊಳ್ಳೋಕ್ಕೆ ನನ್ನ ಅಭ್ಯಂತರವೇನಿಲ್ಲ. ಆದರೆ ಹೆಂಡತಿಯಾಗಿ ಅಲ್ಲ, ಮಗಳಾಗಿ” ಅನ್ನುತ್ತಿದ್ದ ಭೂಪ! ಜೋಗಿಯವರ ಕಥೆಗಳೊಳಗಿನ ವಿಲಕ್ಷಣರಲ್ಲೂ ಇಂಥ ಭಂಡರು ಸಿಗುವುದಿಲ್ಲ ಎಂಬುದೇ ನಾವು ಇವತ್ತು ಎದುರಿಸಬೇಕಾಗಿರುವ ಅನಿವಾರ್ಯ ಸವಾಲಾಗಿದೆ.

Advertisements

ಅಪಾರ ವಿನ್ಯಾಸ!

ಅಕ್ಟೋಬರ್ 26, 2007

ಅಪಾರ ವಿನ್ಯಾಸಗೊಳಿಸಿರುವ ಮುಖಪುಟಗಳೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಅವುಗಳಲ್ಲಿ ಕಾಣುವ ತಾಜಾತನವೇ ಅಪಾರ ಅವರ ಫಳಫಳಿಸುವ ಕ್ರಿಯೇಟಿವಿಟಿಯನ್ನು ಹೇಳುತ್ತದೆ. ಅವರ ವಿನ್ಯಾಸಗಳ ವೈವಿಧ್ಯತೆಯ ರುಚಿ ತೋರಿಸಲು ಇಲ್ಲಿ ಕೆಲವು ಸ್ಯಾಂಪಲ್ಲುಗಳನ್ನು ಕೊಡಲಾಗಿದೆ.

ರೇ-ಖೆ!

ಅಕ್ಟೋಬರ್ 26, 2007

ತ್ಯಜಿತ್ ರೇ. ಬೆಳ್ಳಿಲೋಕದ ಮಾಯಗಾರ.

ಆದರೆ, ರೇ ಜಾಹೀರಾತು ಹಾಗೂ ಪೋಸ್ಟರ್ ಗಳ ವಿನ್ಯಾಸಕಾರರಾಗಿ, ಅದಕ್ಕಿಂತ ಪುಸ್ತಕಗಳ ಮುಖಪುಟ ವಿನ್ಯಾಸಕಾರರಾಗಿ ತೋರಿದ ಕ್ರಿಯಾಶೀಲತೆ ಕೂಡ ಅಷ್ಟೇ ದೊಡ್ಡದು. ನಿರ್ದೇಶಕರಾಗಿ ಅವರು ಸಾಧಿಸಿದ ಅತಿ ದೊಡ್ಡ ಮತ್ತು ಸಾರ್ವಕಾಲಿಕವೆಂಬಂಥ ಯಶಸ್ಸಿನ ಗಾಢ ಬೆಳಕಿನಲ್ಲಿ ಅವರ ಈ ವಿನ್ಯಾಸಕಾರನ ಪ್ರತಿಭೆ ಹೆಚ್ಚು ಜನಕ್ಕೆ ಕಾಣದೇ ಹೋಗುವಂತಾಯಿತೇನೊ.

ರೇ ಅವರು ಪುಸ್ತಕಗಳಿಗೆ ಮಾಡಿದ ಮುಖಪುಟ ವಿನ್ಯಾಸ ಕುರಿತು ನಮ್ಮ ಗಮನ ಸೆಳೆದವರು ಕಲಾವಿದ ಮಿತ್ರ ಅಪಾರ. ರೇ ಅವರಿಗೆ ಸಂಬಂಧಿಸಿದ ವೆಬ್ ಸೈಟಿನಿಂದ ಅವರು ಹೆಕ್ಕಿಕೊಟ್ಟ ಕೆಲವು ವಿನ್ಯಾಸಗಳು ಇಲ್ಲಿವೆ.  

ಆಮಂತ್ರಣವಿದೆ!

ಅಕ್ಟೋಬರ್ 25, 2007

suri_invitation.gif

ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ?

ಅಕ್ಟೋಬರ್ 24, 2007

rs2.jpg

ರಂಗಶಂಕರ ಉತ್ಸವದಲ್ಲಿ ಮದ್ಯದಂತೆ ಪದ್ಯವೂ ಲೈಟಾಗಿ ಹೋಯಿತು. ವೇದಿಕೆಯಲ್ಲಿ ಒಂದು ಬಾಕ್ಸ್ ಇಡಲಾಗಿತ್ತು. ದೇವಸ್ಥಾನದ ಹುಂಡಿಯಂತೆ. ಯಾರು ಬೇಕಾದರೂ ತಮಗೆ ತೋಚಿದ್ದು ಗೀಚಿ ಡಬ್ಬದಲ್ಲಿ ಇಳಿಬಿಡಬಹುದಾಗಿತ್ತು. ಮಾರನೇ ದಿನ ಡಬ್ಬ ಬಿಡಿಸಿ ಚಿಲ್ಲರೆ ಎಣಿಸುವ ಪುರೋಹಿತರಂತೆ ಸಾಲುಗಳನ್ನು ಒಟ್ಟುಮಾಡಿ ಕವಿತೆ ಓದುವ ಸರ್ಕಸ್ ನಡೆಯಿತು. ಪದ ಪದಗಳನ್ನು ಗುಡ್ಡೆಹಾಕಿದರೂ ಒಂದು ಕವಿತೆಯಾಗುತ್ತದೆಂಬುದಕ್ಕೆ ಇದು ಸಾಕ್ಷಿಯಾಗಿತ್ತು. ರಂಗಶಂಕರ ಉತ್ಸವದಲ್ಲಿದ್ದವರೊಬ್ಬರು, ಇನ್ನು ಮುಂದೆ ಕವನಸಂಕಲನ ತರುವುದು ತುಂಬಾ ಈಸಿ ಎಂದು ಖುಷಿಪಟ್ಟರು. ಒಂದು ಪೇಜಿನಲ್ಲಿ ಒಂದು ಸಾಲು ಬರೆದರೆ ಸಾಕು. ಉಳಿದುದನ್ನು ಸಂಕಲನದ ಓದುಗರ್‍ಏ ಬರೆದುಕೊಳ್ಳುತ್ತಾರೆ.

ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ?

ಸದ್ಯದ ಪದ್ಯ

ಅಕ್ಟೋಬರ್ 24, 2007

ವಿತೆ ಈಗ ಮಲ್ಟಿಮೀಡಿಯಾ ಕಾಲದಲ್ಲಿದೆ. ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಕೆ ಎಫ್ ಸಿ, ಕೋಕ್ ಕಾಲದ ತಳಿಗೆ ಕವಿತೆಯ ಕೈ ಹಿಡಿಸುವುದು ಹೇಗೆ? ಅಂತರಂಗದ ಸಖನಾಗಿದ್ದು, ಏಕಾಂತದಲ್ಲಿ ಮಾತ್ರವೇ ಒಲಿಯುತ್ತಿದ್ದ ಕವಿತೆಯ ಕಾಲ ಇದಲ್ಲ. ಇಂದಿನ ಅಬ್ಬರಕ್ಕೆ ತಕ್ಕಂತೆ ಕವಿತೆಯೂ ಒಂದಿಷ್ಟು ಅಬ್ಬರದೊಂದಿಗೆ ರ್‍ಯಾಂಪ್ ಏರಿ, ಕ್ಯಾಟ್ ವಾಕ್ ಮಾಡಿ, ಮುಗುಳ್ನಕ್ಕು, ಬಿನ್ನಾಣ ಪ್ರದರ್ಶಿಸಿ, ತನ್ನೆಡೆಗೆ ಓದುಗರನ್ನು, ಕೇಳುಗರನ್ನು, ನೋಡುಗರನ್ನು ಸೆಳೆದುಕೊಳ್ಳಬೇಕಾದ ಕಾಲ. ರಂಗಶಂಕರ ನಾಟಕೋತ್ಸವದಲ್ಲಿ ಈ ಸೆಳೆದುಕೊಳ್ಳುವ ಧಾಟಿಯ ಒಂದು ಪುಟ್ಟ ಪ್ರಯತ್ನ ನಡೆಯಿತು.

“ಅವಳ ಅಂಗಿ ಇವಳಿಗಿಟ್ಟು ನೋಡಬಯಸಿದೆ” ಎಂಬಂತೆ, ಕವಿತೆಗೆ ರಂಗಭೂಮಿಯ ಲಂಗ ಉಡಿಸಿ ಒಂದಿಷ್ಟು ಹೊತ್ತು ಓಡಾಡಿಸುವ ಪ್ರಯತ್ನ ನಡೆಯಿತು. ಆರ್ಟ್ ಗೆ ಮಾತ್ರ ಕ್ಯುರೇಟರ್, ಮ್ಯೂಸಿಯಂಗೆ ಮಾತ್ರ ಕ್ಯುರೇಟರ್ ಅಂದುಕೊಂಡಿದ್ದ ಕಾಲದಲ್ಲಿ ಕವಿತೆಗೂ ಒಬ್ಬ ಕ್ಯುರೇಟರ್ ಹುಟ್ಟಿಕೊಂಡ ಅದ್ಭುತ(?) ಜರುಗಿಹೋಯಿತು. ಕವಿತೆ ಮೌನದ ಸಂಗಾತಿಯೊ ಇಲ್ಲಾ ಮಾರ್ಕೆಟ್ ನಂಟಿನ ನೃತ್ಯಗಾತಿಯೊ ಎಂಬ ಮೂಲಪ್ರಶ್ನೆಯನ್ನು ಈ “ಸದ್ಯದ ಪದ್ಯ” ಹುಟ್ಟುಹಾಕಿತು. 

 [rockyou id=88524107&w=426&h=319]

ಓದಿದ ಕ್ಷಣವೇ ಬಿಡುಗಡೆ!

ಅಕ್ಟೋಬರ್ 24, 2007