ಹೊಸ ಕಾಲದ ಲೇಖಕಿಯರಲ್ಲಿ ಮಾದರಿಗಳು ಎಲ್ಲಿ?

agnikanyas.jpg

ಕೆ ಸತ್ಯನಾರಾಯಣ

ಪ್ಪತ್ತನೆ ಶತಮಾನವು ಮುಗಿಯಿತು. ಸ್ತ್ರೀವಾದ ಮತ್ತು ಸ್ತ್ರೀಸಂವೇದನೆಯ ಮಾತುಗಳನ್ನು ಕೇಳುತ್ತಾ, ಓದುತ್ತಾ ಕೂಡ ನಾವು ಕೆಲವು ದಶಕಗಳನ್ನು ಕಳೆದಿದ್ದೇವೆ. ಹೊಸ ಕಾಲದ ಹೆಂಗಸಿನಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ಹೊಸ ಕಾಲದ ಹೆಂಗಸೆಂದರೆ ಆಕೆಯೇನು ದೂರ ಲೋಕದ ಅದೃಶ್ಯ ಹೆಂಗಸಲ್ಲ. ನಾವೆಲ್ಲರೂ ನಮ್ಮ ನಮ್ಮ ಹೆಂಡತಿಯರಿಂದ, ತಂಗಿಯರಿಂದ, ಗೆಳತಿಯರಿಂದ, ಸಹೋದ್ಯೋಗಿಗಳಿಂದ, ಅತ್ತಿಗೆಯರಿಂದ, ಅತ್ತೆಯರಿಂದ ನಿರೀಕ್ಷಿಸುವುದಾದರೂ ಏನನ್ನು? ಈ ಎಲ್ಲ ನಿರೀಕ್ಷೆಗಳ, ಆಕಾಂಕ್ಷೆಗಳ ಸಾಕಾರ ರೂಪವಾಗಿ ನಮ್ಮ ಲೇಖಕಿಯರು, ಲೇಖಕರು ಸೃಷ್ಟಿಸುತ್ತಿರುವ ಪಾತ್ರ ಪ್ರಪಂಚವಾದರೂ ಎಂಥದು? ಈ ಪುಟ್ಟ ಟಿಪ್ಪಣಿ ಇಂತಹ ಪ್ರಶ್ನೆಗಳನ್ನು ಕುರಿತದ್ದು.

ಕಥನ ಸಾಹಿತ್ಯದಲ್ಲಿ, ವಿಶೇಷವಾಗಿ ಕಾದಂಬರಿ ಪ್ರಕಾರದಲ್ಲಿ ತುಂಬಾ ದೊಡ್ಡ ಪ್ರತಿಭೆಗಳಿಗೆ ಮನುಷ್ಯ ಸ್ವಭಾವದಲ್ಲಾಗುವ ಪಲ್ಲಟಗಳ ಕುರಿತು ನೋಡಬಲ್ಲ ಮುನ್ನೋಟವಿರುತ್ತದಂತೆ. ದಸ್ತೊವೆಸ್ಕಿ ”Notes From Under Ground” ಬರೆದಾಗ ಇಪ್ಪತ್ತನೆ ಶತಮಾನದಲ್ಲಿ ರೂಪುಗೊಳ್ಳುವ ಆಧುನಿಕ ಮನುಷ್ಯನ ವಿಚಾರವಾದ ಒಳಿತು-ಕೆಡುಕುಗಳ ಸಂಘರ್ಷ, ಹಿಂಸೆಯ ಮೂಲಕ ನಮ್ಮ ಆದರ್ಶವನ್ನು ಸಾಧಿಸಿಕೊಳ್ಳಬಹುದೆ? ವೈಜ್ಞಾನಿಕ ಬೆಳವಣಿಗೆಯ ನಂತರ ನಮಗೆ ಸೂಕ್ತವಾಗಬಲ್ಲ ಧರ್ಮದ ಸ್ವರೂಪ ಯಾವುದು ಎಂಬ ಪ್ರಶ್ನೆಗಳನ್ನೆಲ್ಲ ಎದುರಿಸುತ್ತ ತನ್ನ ಪಾತ್ರಗಳನ್ನು ಕಡೆಯುತ್ತಾ ಹೋದ. ಈ ಪ್ರಮಾಣ್ದಲ್ಲಲ್ಲದಿದ್ದರೂ ನಮ್ಮಲ್ಲಿ ಕುವೆಂಪು, ಕಾರಂತರು ತಮ್ಮ ಹೂವಯ್ಯ, ಗುತ್ತಿ, ರಾಮಯ್ಯ, ಲಚ್ಚ -ಇಂತಹ ಪಾತ್ರಗಳ ಮೂಲಕ ಹೊಸ ಕಾಲದಲ್ಲಿ ನಿರ್ಮಾಣವಾಗುವ ವ್ಯಕ್ತಿಗಳ ರೂಪುರ್‍ಏಷೆಯ ಮುಂಗಾಣ್ಕೆಯನ್ನು ನಮಗೆ ಕೊಟ್ಟರು. ತದನಂತರದ ಲೇಖಕರು, ಈ ಮೂಲಮಾದರಿಗಳನ್ನು ಇಟ್ಟುಕೊಂಡು ತಮ್ಮ ತಮ್ಮ ಕಾಲದ, ಅನುಭವದ ಹಿನ್ನೆಲೆಯಲ್ಲಿ ಈ ಮೂಲ ಮಾದರಿಗಳಿಗೆ ವಿಸ್ತರಣೆ ನೀಡುತ್ತಾ ಹೋದರು. ಇಂತಹ ಐತಿಹಾಸಿಕ ಕೆಲಸವನ್ನು ಸ್ತ್ರೀಪಾತ್ರಗಳಿಗೆ ಸಂಬಂಧಪಟ್ಟ ಹಾಗೆ ತ್ರಿವೇಣಿಯವರು ಮಾಡಿದರೆನಿಸುತ್ತದೆ. ಹೊಸ ವಿದ್ಯಾಭ್ಯಾಸ, ಉದ್ಯೋಗ, ಸ್ವಂತಿಕೆಯ ಹಂಬಲ ಇವೆಲ್ಲವೂ ಗಂಡಸು-ಹೆಂಗಸಿನ ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳನ್ನು, ತಂದೊಡ್ಡುವ ಸಮಸ್ಯೆಗಳನ್ನು ಅವರು ಜನಪ್ರಿಯ ಕಾದಂಬರಿಯ ಚೌಕಟ್ಟಿನೊಳಗೆ ಮಂಡಿಸುತ್ತಾ ಹೋದರು. ಅನಂತರದ ಲೇಖಕಿಯರು ಈ ಮೂಲಮಾದರಿಯನ್ನು ವಿಸ್ತರಿಸುತ್ತಿದ್ದಾರೆ, ಮಾರ್ಪಡಿಸುತ್ತಿದ್ದಾರೆ. ಸ್ತ್ರೀಯರ ಕಥಾಲೋಕದಲ್ಲಿ ನಮಗೆ ಹೂವಯ್ಯ, ಲಚ್ಚ, ಗುತ್ತಿ, ರಾಮನಂಥವರು ಸಿಕ್ಕಿದ್ದಾರೆಯೇ? ನನಗೆ ಗೊತ್ತಿಲ್ಲ.

ಹೆಂಗಸರ ಕಥಾಲೋಕದ “ಹೀರೋ” ಇನ್ನೂ ನಿರ್ಮಾಣವಾಗುತ್ತಿದೆ ಎಂದೇ ನನ್ನ ಭಾವನೆ. ಹೆಂಗಸಿನ ಹುಡುಕಾಟ ನಾನಾ ದಿಕ್ಕುಗಳಲ್ಲಿ ಹಂಚಿಹೋಗಿದೆ. ಲಾಗಾಯ್ತಿನಿಂದ ಬಂದ ಪಾಲನಾ ಪ್ರವೃತ್ತಿಯನ್ನು ಅವಳ ಸ್ವಭಾವ ನಿರಾಕರಿಸುವುದಿಲ್ಲ. ಹೊಸ ಕಾಲದ ಒತ್ತಡದಿಂದ ಮೂಡಿಬರುವ ವೃತ್ತಿಪರತೆ, ಸ್ವಂತಿಕೆಯ ಹಂಬಲವನ್ನು ಕೂಡ ಅವಳು ಕೈಬಿಡುವ ಹಾಗಿಲ್ಲ. ತನ್ನ ದೇಹದಲ್ಲಿರುವ ಕಾಮದ ಸ್ವಚ್ಛಂದತೆಯನ್ನು ಕೂಡ ಅವಳು ಗುರುತಿಸಬೇಕು. ಇವೆಲ್ಲವನ್ನೂ ಒಳಗೊಳ್ಳುವ ಹೆಂಗಸು ನಮ್ಮ ಸಮಾಜದಲ್ಲಿಯೇ ಇನ್ನೂ ನಿರ್ಮಾಣಗೊಂಡಿಲ್ಲವಾದ್ದರಿಂದ, ಸಾಹಿತ್ಯ ಕೃತಿಗಳಲ್ಲಿ, ಕಥನ ಸಾಹಿತ್ಯದಲ್ಲಿ ಸಿಕ್ಕಿಬಿಡಬೇಕು ಎಂದು ನಿರೀಕ್ಷಿಸುವುದು ಅಷ್ಟೊಂದು ಸೂಕ್ತವಲ್ಲವೇನೊ.

ಸ್ವತಃ ಕತೆಗಾರನಾಗಿ, ಕಾದಂಬರಿಕಾರನಾಗಿ ಕೂಡ ನಾನು ಈ ಸಮಸ್ಯೆಯನ್ನು ಎದುರಿಸಿದ್ದೇನೆ. ಹೆಂಗಸರ ಪಾಲನಾ ಪ್ರವೃತ್ತಿಯನ್ನು ಸೂಚಿಸುವಂಥ ಹಳೆಯ ತಲೆಮಾರಿನ ಹೆಂಗಸು, ಅಜ್ಜಿಯರ ಪಾತ್ರವನ್ನು ಸೃಷ್ಟಿಸಿದಾಗ ಸಾಮಾನ್ಯವಾಗಿ ಎಲ್ಲರೂ ಅಂಥ ಪಾತ್ರಗಳನ್ನು ಭಾವನಾತ್ಮಕವಾಗಿ ಒಪ್ಪುತ್ತಾರೆ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಆತ್ಮಾನುಕಂಪದಿಂದ ಪ್ರತಿ ಕ್ಷಣವೂ ಕೊರಗುವ ಪಾತ್ರಗಳನ್ನು ಸೃಷ್ಟಿಸಿದಾಗಲೂ ಓದುಗರು ಸಂತೋಷಪಡುತ್ತಾರೆ. ೧೯೯೨ರಲ್ಲಿ ನಾನು ಪ್ರಕಟಿಸಿದ “ಗೌರಿ” ಕಾದಂಬರಿಯ ನಾಯಕಿ ಮನೆಗೆಲಸದವಳು. ಕಾದಂಬರಿಯಲ್ಲಿ ಅವಳು ಸಾಹಿತ್ಯಕೃತಿಯ ಪಾತ್ರವೊಂದರಂತೆ ಮೂಡಿಬರದೆ ನಿಜಜೀವನದ ವ್ಯಕ್ತಿಯೊಬ್ಬರ ತದ್ರೂಪಿನಂತೆ ಮೂಡಿಬಂದದ್ದರಿಂದ ಆಕೆಯ ತಿಳಿವಳಿಕೆ, ಚಟುವಟಿಕೆ, ಪ್ರತಿಭಟನೆ ಎಲ್ಲವೂ ಮೆಲುದನಿಯಲ್ಲಿ ನಡೆಯಿತು. ಅದೊಂದು ರೀತಿಯಲ್ಲಿ ಬಿಡುಗಡೆಯೇ ಇಲ್ಲದ ಸ್ಥಿತಿಯ ವರ್ಣನೆ. ಆದರೂ ಇದು ಓದುಗರಿಗೆ ಇಷ್ಟವಾಯಿತು. ಈಚಿನ “ಕಾಲಜಿಂಕೆ” ಕಾದಂಬರಿಯಲ್ಲಿ ನಾನು ಸೃಷ್ಟಿಸಿದ ಪ್ರಾರ್ಥನಾ ಎನ್ನುವ ಹೊಸ ಕಾಲದ ತರುಣಿಯ ಪಾತ್ರ ಇದಕ್ಕಿಂತ ತೀರಾ ಭಿನ್ನವಾದ್ದು. ಈಕೆ ತರುಣಿ, ಸೂಕ್ಷ್ಮಜ್ಞೆ, ಆತ್ಮನಿರೀಕ್ಷೆಯಿರುವವಳು. ಪ್ರೀತಿಸಬಲ್ಲಳು, ಪ್ರತಿಭಟಿಸಬಲ್ಲಳು, ಹಿಂದಿನ ಪೀಳಿಗೆಯನ್ನು ವಿಮರ್ಶಿಸುತ್ತಲೂ ಸಹಾನುಭೂತಿ ತೋರಬಲ್ಲಳು. ತನ್ನ ವ್ಯಕ್ತಿತ್ವದ ಹುಡುಕಾಟದಲ್ಲಿ ಸ್ವತಃ ತಂದೆ ತಾಯಿಗಳನ್ನು ಅಲ್ಲದೆ, ಈ ಕಾಲದ ಎಲ್ಲ ಸಾಮಾಜಿಕ-ರಾಜಕೀಯ ಪ್ರಶ್ನೆಗಳನ್ನು ಕೂಡ ಒಳಗೊಳ್ಳಬಲ್ಲಳು. ಅವಳಲ್ಲಿ ಭಾವತಿವ್ರತೆಯಿದೆ, ಕನಸುಗಾರಿಕೆಯಿದೆ, ಒತ್ತಾಸೆಯಿದೆ. ಇದೆಲ್ಲದರ ಜೊತೆಗೆ ಅದೀಗ ತಾನೆ ತನ್ನ ದೇಹದಲ್ಲಿ ಅರಳುತ್ತಿರುವ ಯೌವನದ, ಚೈತನ್ಯದ ಅರಿವೂ ಇದೆ. ಈಕೆ, ಇವಳಂಥವಳು ನಮ್ಮ ಕಾಲದಲ್ಲಿ ನಿರ್ಮಾಣಗೊಳ್ಳಬಹುದಾದ, ನಿರ್ಮಾಣಗೊಳ್ಳಲೇಬೇಕಾದ ಹೆಂಗಸಿನ ಮೂಲ ಮಾದರಿಯಾಗಿರಬಹುದು. ಆದರೆ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ, ಈಕೆ ಸಂಕೀರ್ಣಳಾಗಿ ಸಂವೇದನಾಶೀಲವಾಗಿ ಕಂಡರೂ ಮೂಲಭೂತವಾಗಿ ಇಂತಹ ಪಾತ್ರ ಕನ್ಪನೆಯೇ ರೋಮ್ಯಾಂಟಿಕ್ ಆದದ್ದು, ಆದರ್ಶೀಕರಣಗೊಂಡದ್ದು! ಏಕೆಂದರೆ ನಮ್ಮ ಕಾಲದಲ್ಲೇ, ನಮ್ಮೆದುರಿಗೇ ಮೇಧಾ ಪಾಟ್ಕರ್, ಕಿರಣ್ ಮುಜುಂದಾರ್, ಸುಧಾಮೂರ್ತಿ ಇವರೆಲ್ಲ ಇರುವಂತೆ ಜಯಲಲಿತ, ರಾಬ್ಡಿದೇವಿ, ಮೋನಿಕಾಬೇಡಿ, ಕಿರಣ್ ಬೇಡಿ, ಸಾಲುಮರದ ತಿಮ್ಮಕ್ಕ, ಪ್ರತಿಭಾತಾಯಿ ಪಾಟೀಲ್ ಕೂಡ ಇದ್ದಾರೆ. ನಿಜ, ಇವರೆಲ್ಲರೂ ಒಂದೇ ಪಾತ್ರದಲ್ಲಿ, ಒಂದೇ ವ್ಯಕ್ತಿತ್ವದಲ್ಲಿ ಎರಕಗೊಳ್ಳಲಾರರು. ಆದರೆ ಒಂದು ಮಹತ್ವದ ಕೃತಿಯಲ್ಲಿ ಇವರೆಲ್ಲರೂ ಬೇರೆ ಬೇರೆ ದೃಷ್ಟಿಕೋನಗಳಾಗಿ, ಸಾಧ್ಯತೆಗಳಾಗಿ ಬಂದು ಒಬ್ಬರನ್ನೊಬ್ಬರು ಪರೀಕ್ಷಿಸುತ್ತಾ, ಪ್ರಚೋದಿಸುತ್ತಾ ಹೊಸ ಮೂರ್ತಿಯ, ಹೊಸ ಮೂಲ ಮಾದರಿಯ ಸೃಷ್ಟಿಗೆ ಕಾರಣರಾಗಬಹುದು. ಗಂಡಸಿನ ಪಾತ್ರ ಸೃಷ್ಟಿ ಕೂಡ ನಮ್ಮ ಕಥನ ಸಾಹಿತ್ಯದಲ್ಲಿ ಇನ್ನೂ ಆಗಬೇಕಾಗಿದೆ. ಇದೆಲ್ಲ ಕೇವಲ ಪಾತ್ರ ಸೃಷ್ಟಿಯ ಹಂಬಲದಿಂದ ಆಗುವಂಥದ್ದಲ್ಲ. ನಮ್ಮೆದುರಿಗಿನ, ನಮ್ಮ ಕಾಲದ ಪಲ್ಲಟಗಳ ನಾಡಿಮಿಡಿತ ಬಲ್ಲವರು ಮಾತ್ರ ಇಂತಹ ಸೃಷ್ಟಿಗೆ ಕೈಹಾಕಬಲ್ಲರು.

ಇವರೆಲ್ಲ ಇಡಿಯಾಗಿಯೇ, ಆಂಶಿಕವಾಗಿಯೇ, ನಮ್ಮ ಕುಟುಂಬದ ಸದಸ್ಯರಾಗೇ ಎದುರಾಗಿಬಿಟ್ಟರೆ, ನಮಗೆ ಎದುರಿಸುವ ಚೈತನ್ಯವಿರುವುದೇ ಇಲ್ಲ. ಇಂತಹುದೊಂದು ಚೈತನ್ಯ ಎದುರಾಗದಷ್ಟು ಜಾಣತನದಿಂದ ನಾವು ವರ್ತಿಸುತ್ತೇವೆ. ಅಂತಹ ಸಾಧ್ಯತೆಗಳನ್ನು ಚಿವುಟಿಹಾಕುತ್ತೇವೆ. ನಮ್ಮ ಹೆಣ್ಣುಮಕ್ಕಳಿಗೆ ನೀಡುವಷ್ಟು ಸ್ವಾತಂತ್ರ್ಯವನ್ನು, ನಾವು ನಮ್ಮ ಹೆಂಡತಿಯರಿಗೆ ನೀಡುವುದಿಲ್ಲ. ಮಗಳ ಬದಲಾವಣೆಗಳು ಸೂಕ್ಷ್ಮವಾಗಿ ಅರ್ಥವಾಗುವಷ್ಟು ಸೊಸೆಯ ಆಕಾಂಕ್ಷೆಗಳು ಅರ್ಥವಾಗುವುದಿಲ್ಲ.

ಈಚೆಗೆ ನನ್ನ ಗೆಳತಿಯೊಬ್ಬರು ನಡೆಸುತ್ತಿದ್ದ ಸ್ತ್ರೀವಾದಿ ಮಾಸಪತ್ರಿಕೆಯೊಂದು ನಿಂತುಹೋಯಿತು. ಆಕೆಯೇನು ಧೀರೋದಾತ್ತಳಲ್ಲ, ತ್ಯಾಗಮಯಿಯೂ ಅಲ್ಲ. ಮಧ್ಯಮವರ್ಗದ ಜೀವನದ ಎಲ್ಲ ಹಳವಂಡಗಳೂ ಅವಳ ಬದುಕಿನಲ್ಲಿದ್ದವು. ಮನೆಕೆಲಸ, ಆಫೀಸಿನ ಕೆಲಸ, ಸಂಘಟನೆಯ ಕೆಲಸ, ಪತ್ರಿಕೆಯ ಜವಾಬ್ದಾರಿ ಎಲ್ಲವೂ. ಇಪ್ಪತ್ತೈದು ವರ್ಷಗಳ ಹಿಂದೆ ಆಕೆಯ ಪತ್ರಿಕೆ ಪ್ರಾರಂಭವಾದಾಗ, ಮನೆಯಲ್ಲಿ ಒಂದು ವರ್ಷದ ಮಗು ಕಾಯುತ್ತಿದ್ದರೂ ಈಕೆ ಆಫೀಸು ಕೆಲಸ ಮುಗಿಸಿ, ಹಾದಿಯಲ್ಲಿ ಪತ್ರಿಕೆ ಅಚ್ಚಾಗುತ್ತಿದ್ದ ಮುದ್ರಣಾಲಯಕ್ಕೆ ಹೋಗಿ ನಂತರ ಮನೆಗೆ ಹೋಗುತ್ತಿದ್ದಳು. ಇದನ್ನೆಲ್ಲ ನೆನೆಯುತ್ತಾ ನಾನು ಆಕೆಯನ್ನು ಹೊಗಳಿದಾಗ ಅವಳು ಕೇಳಿದ್ದು ಒಂದೇ ಪ್ರಶ್ನೆ.

“ನಾನು ನಿಮ್ಮ ಕುಟುಂಬದ ಸದಸ್ಯೆಯಾಗಿದ್ದರೂ ನೀವು ಹೀಗೇ ಹೊಗಳುತ್ತಿದ್ದಿರಾ, ನನ್ನನ್ನು ಇದೇ ರೀತಿ ಬೆಳೆಯಲು ಬಿಡುತ್ತಿದ್ದಿರಾ?”

ಇಂತಹ ಪ್ರಶ್ನೆಗೆ ನಮ್ಮ ಅಂತರಂಗದಲ್ಲಿ ಕೊಟ್ಟುಕೊಳ್ಳುವ ಉತ್ತರಕ್ಕೆ ಮಾತ್ರ ಹೊಸ ಕಾಲದ ಹೊಸ ಹೆಂಗಸಿನ ಸ್ವರೂಪ ಮತ್ತು ಆಕೆ ಸಾಹಿತ್ಯಕೃತಿಯಲ್ಲಿ ಮತ್ತು ನಿಜ ಜೀವನದಲ್ಲಿ ನಿರ್ಮಾಣಗೊಳ್ಳುವಾಗ ಇರುವ ಕಷ್ಟಗಳು ಅರ್ಥವಾಗಬಲ್ಲದು.

Explore posts in the same categories: ಅಮೃತಕ್ಕೆ ಗರುಡ

Comment: