ಸ್ವಪ್ನಲೋಕದ ಸಂಚಾರದಲ್ಲಿ ನಮ್ಮ ಹೊತ್ತಿನ ಧ್ಯಾನ
ಜೋಗಿ ಕಥೆಗಳು
ಲೇ: ಜೋಗಿ
ಪ್ರ: ಅಂಕಿತ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೦೭, ಬೆಲೆ: ೭೦ ರೂ.
————————————
ವಿಜಿ
ಉತ್ತರ ಪ್ರದೇಶದಲ್ಲಿ ಪಾಂಡಾ ಅಂತೊಬ್ಬ ಮನುಷ್ಯ ತನ್ನನ್ನು ತಾನು “ದೂಸರಿ ರಾಧಾ” ಎಂದು ಹೇಳಿಕೊಂಡು ಓಡಾಡುತ್ತಾನೆ. ಸಾಧಾರಣದವನೇನೂ ಅಲ್ಲ. ಐಪಿಎಸ್ ಆಫೀಸರ್ ಆಗಿದ್ದವನು. ಹೆಣ್ಣಿನ ಉಡುಪು ಧರಿಸಿ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು, ಕೃಷ್ಣನ ಭಜನೆ ಮಾಡುತ್ತಾ ಕೆಲಸವನ್ನೇ ಮರೆತವನು. ಕಡೆಗೆ ಕೆಲಸವೂ ಹೋಯ್ತು. ಇವನೊಂದಿಗೆ ಏಗಲಾರದೆ ಹೆಂಡತಿ ಡಿವೋರ್ಸಿಗಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ಇವನನ್ನು ಮಾತ್ರ ಅದಾವುದೂ ಬಾಧಿಸಿಲ್ಲ. ಕೃಷ್ಣ ಜನ್ಮಾಷ್ಟಮಿ ಬಂದರೆ ರಾಧೆಯ ವೇಷದಲ್ಲಿ ಕೃಷ್ಣನನ್ನು ಪೂಜಿಸಿಕೊಂಡು, ಭಜನೆ ಹಾಡಿಕೊಂಡು, ವಿಚಿತ್ರವಾಗಿ ಕುಣಿದುಕೊಂಡು ಇದ್ದುಬಿಡುತ್ತಾನೆ.
ಜೋಗಿಯವರ “ಗೋವಿಂದ ವಿಠಲ” ಅನ್ನೋ ಕಥೆಯಲ್ಲಿ ಜೋಶಿ ಅಂತೊಂದು ಪಾತ್ರ ಬರುತ್ತದೆ. ಪರಮನಾಸ್ತಿಕ ಜೋಶಿ ಕೀರ್ತನೆಗಳ ಸಂಗ್ರಹಕ್ಕೆಂದು ಹೊರಟು ಅವುಗಳ ಮೋಡಿಗೆ ಕಿವಿಗೊಡುತ್ತಾ, ಅವು ತನ್ನನ್ನೇ ಕುರಿತಾಗಿವೆ ಎಂದು ವಿಚಿತ್ರ ಬಗೆಯಲ್ಲಿ ಅವುಗಳೊಂದಿಗೆ ತಾದಾತ್ಮ್ಯ ಸಾಧಿಸಿದವನು, ಕಡೆಗೆ ಕೃಷ್ಣನೆದುರು ಅವುಗಳನ್ನು ಹಾವಭಾವ ಬೆರೆಸಿ ಹಾಡಿಕೊಂಡು ಇದ್ದುಬಿಡುತ್ತ ಎಲ್ಲ ವಾಸ್ತವಕ್ಕೂ ಬೆನ್ನುಹಾಕುತ್ತಾನೆ. ಅವನನ್ನು ಸರಿಯಾಗಿ ವರ್ತಿಸುವಂತೆ ಕೇಳಬೇಕೆಂದು ಬಂದ ಆಧುನಿಕ ಧೋರಣೆಯ ಪಂಪಾಪತಿ, ಜೋಶಿಯ ಸ್ಥಿತಿ ಕಂಡು ಸ್ಟನ್ ಆಗಿಬಿಡುತ್ತಾರೆ; ಏನೋ ಒಂದು ಆಧ್ಯಾತ್ಮಿಕವಾದದ್ದು ಈಗಿನ್ನೇನು ಘಟಿಸಿಯೇಬಿಡುತ್ತದೆ ಎಂದು ಕಾಯುತ್ತಾರೆ.
ಪಾಂಡಾನದು ಸೋಗೊ ಹುಚ್ಚೊ ಎಂದು ಅನುಮಾನಿಸುತ್ತಿರಬೇಕಾದರೆ ಕಂಡಿದ್ದು ಈ ಜೋಶಿ. ಕಥೆಯೊಳಗೆ ಜೋಶಿಯನ್ನು ಹುಚ್ಚ ಅಂದುಕೊಳ್ಳುವ ಜನವಿದೆ. ಕೆಲಸದಿಂದ ತೆಗೆದುಹಾಕಬೇಕೆಂಬ ಒತ್ತಾಯಗಳಿವೆ. ಆದರೆ, ನಮ್ಮಂಥವರ ಪ್ರತಿನಿಧಿಯಂತಿರುವ ಪಂಪಾಪತಿ ಒಂದು ಹಂತದಲ್ಲಿ ಜೋಶಿಯನ್ನು ನೋಡುವ ಬಗೆ ಬೇರೆ. ಪಂಪಾಪತಿ ಈ ಜೋಶಿಯ ಸ್ಥಿತಿಯೊಂದಿಗೆ ಇನ್ವಾಲ್ವ್ ಆಗುವ ಹಂತದಲ್ಲಿ ಕಥೆ ಮುಗಿಯುತ್ತದೆ. ಇಲ್ಲಿ ನಾವೂ ಪಾಂಡಾನನ್ನು ಹೀಗೇ ನೋಡಬೇಕೇ ಎಂಬುದಲ್ಲ ಚಿಂತೆ. ಸಮಾಜದ ವಿಭ್ರಮೆ ಸಮಾಜವನ್ನು, ನಮ್ಮ ವಿಭ್ರಮೆ ನಮ್ಮನ್ನು ಯಾವುದೇ ಸೋಗಿನಲ್ಲಾದರೂ ಕಾಡೀತು ಎಂಬುದನ್ನು ನೆನಪಿಸಿಕೊಳ್ಳಲು ಜೋಶಿಯ ಜೊತೆ ಪಾಂಡಾನನ್ನು ಕೂರಿಸಬೇಕೆನ್ನಿಸುತ್ತದೆ. ಇದು ಹೋಲಿಕೆಯಲ್ಲ. ಯಾವುದೇ ಲೆಕ್ಕದಲ್ಲಿ ನೋಡಿದರೂ ಇವರ ನಡುವೆ ಅಂತರ ಜಾಸ್ತಿ ಇದೆ.
ಜೋಗಿಯವರ ಇಲ್ಲಿನ ಬಹುತೇಕ ಕಥೆಗಳು ಎದುರಿಸುವುದು ಇಂಥ ವಿಲಕ್ಷಣ ವ್ಯಕ್ತಿಗಳು ಮತ್ತು ಸಂದರ್ಭವನ್ನು. ವಾಸ್ತವದಲ್ಲಿ ನಾವು ಸಹಜವಾಗಿ ಎದುರಿಸಲಾರದ ಹಂತಗಳೊಂದಿಗೆ ಇಲ್ಲಿ ಮುಖಾಮುಖಿ ಸಂಭವಿಸುತ್ತದೆ, ಅದೂ ಬಹಳ ಸಲ ಸಹಜವೇ ಎಂಬಷ್ಟು ಸಲೀಸಾಗಿ. ಈ ಮುಖಾಮುಖಿಯ ನಂತರದ ತಲ್ಲಣ ಮತ್ತು ತವಕಗಳು ವಾಸ್ತವದ ನೆಲಕ್ಕೇ ವಾಪಸ್ಸು ಜಿಗಿದು ಅದೇ ಗುಂಗಿನಲ್ಲಿ ನಡೆಯತೊಡಗುತ್ತವೆ. ತರ್ಕದ ಸುಳಿದಾರಿಯ ಕಾಡು ಸುತ್ತುತ್ತ ಎಂಥದೋ ನಿಗೂಢದ ಶಿಖಾರಿಯಲ್ಲಿ ತೊಡಗಿದಂತಿದೆ ಇವು. ವಾಸ್ತವಕ್ಕೆ ಅಂಟಿಕೊಂಡಂತಿವೆ ಎಂದು ತೋರುವಂಥ, ಆದರೆ ಕೈಗೆ ನಿಲುಕದ ಅದಾವುದೋ ಆಚೆಗಿನ ಸ್ತರದ ಮನಸ್ಸಿನಲ್ಲಿ ಇವು ಒಂದು ಬಗೆಯ ಬೇಹುಗಾರಿಕೆ ನಡೆಸುತ್ತವೆ. ಆ ಮೂಲಕ ಕಥೆಗೆ ಇವತ್ತಿನ ನಿಲುವಿನಲ್ಲಿ ಹೊಸ ಪರಿಭಾಷೆಯನ್ನು ದಕ್ಕಿಸಿಕೊಳ್ಳಲು ತುಡಿಯುತ್ತವೆ.
ಮನುಷ್ಯ ಸತ್ಯದ ತೆಕ್ಕೆಗೆ ಬರುವುದು ಮಂಪರಿನಲ್ಲಿ ಮಾತ್ರ. ದೇವನೂರರ ಕಥೆಯಲ್ಲಿ ದಲಿತನೊಬ್ಬ ಕುಡಿದ ಮತ್ತಿನಲ್ಲೇ ತನ್ನ ಧಣಿಯ ಬಗ್ಗೆ, ಆತನೊಂದಿಗಿನ ತನ್ನ ಹೆಂಡತಿಯ ಹಾದರದ ಬಗ್ಗೆ ಪ್ರತಿಭಟಿಸುತ್ತಾನೆ. ರವಿ ಬೆಳಗೆರೆಯವರೂ, ಸಾರಿಗೆ ಸಂಸ್ಥೆ ನೌಕರನೊಬ್ಬ ಬಸ್ಸುಗಳ ಬಗ್ಗೆ ಮಾಹಿತಿ ಕೊಡಲಿಕ್ಕಿರುವ ಮೈಕನ್ನು ತನ್ನ ಸುತ್ತಲಿನ ಯಾರೂ ಅರಗಿಸಿಕೊಳ್ಳಲಾರದ ಸತ್ಯ ಹೇಳುವುದಕ್ಕೆ ಬಳಸುವ ಆತನ ಭ್ರಮೆಯ ಸ್ಥಿತಿಯ ಬಗ್ಗೆ ಒಂದು ಕಥೆ ಬರೆದಿದ್ದಾರೆ. ಈ “ಅರಗಿಸಿಕೊಳ್ಳಲಾರದ ಸತ್ಯ” ಹೇಳುವವರೆಲ್ಲ ಸಮಾಜದ ಕಣ್ಣಿಗೆ ಹುಚ್ಚರಾಗಿಯೇ ಕಾಣುವ ತಮಾಷೆ, ಅದಕ್ಕಿಂತ ವಿಪರ್ಯಾಸದ ಬಗ್ಗೆಯೂ ಇಲ್ಲಿ ಗಮನಿಸಬೇಕು. ಈ ಮಂಪರು ಅಥವಾ ವಿಭ್ರಮೆ ನಮ್ಮ ಸದ್ಯದ ಸ್ಥಿತಿಗೆ ಮುಖಾಮುಖಿಯಾಗುತ್ತಲೇ ಇರುವ ಸಂಗತಿ. ಇದರ ಬಗ್ಗೆ ನಮಗೆ ಭಯ ಕೂಡ ಇದೆ. ಇದರಿಂದ ಆದಷ್ಟೂ ದೂರವಿರುವುದರಲ್ಲೇ ನಮ್ಮ ಎಚ್ಚರವೆಂಬುದು ತನ್ನನ್ನು ತಾನು ಸವೆಯಿಸಿಕೊಳ್ಳುತ್ತದೆ. ಹಾಗಿದ್ದೂ ಇದರ ಹಿಡಿತದಿಂದ ತಪ್ಪಿಸಿಕೊಂಡಿರುವುದು ಅಷ್ಟು ಸುಲಭವೇನಲ್ಲ.
ಜೋಗಿಯವರ ಈ ಕಥೆಗಳ ಜಗತ್ತು ಕೂಡ ಇಂಥದೊಂದು ಅರಗಿಸಿಕೊಳ್ಳಲಾರದ ಸತ್ಯದ ಕಡೆಗೆ ಬೆರಳು ತೋರಿಸುತ್ತದೆ. ನಾವು ನಿರಾಕರಿಸಲು ಮತ್ತೆ ಮತ್ತೆ ಯತ್ನಿಸಬಯಸುವುದರ ಬಗ್ಗೆ ಅದು ಕಾಣಿಸುವ ಸತ್ಯಗಳು ಅಕ್ಟೋಪಸ್ ವಾಸ್ತವದ ಹಾಗೆ ಕಾಣಿಸುತ್ತವೆ. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬ ನಿಷ್ಕರ್ಷೆಯ ದಡಕ್ಕೆ ತಂದು ಮುಟ್ಟಿಸಿ, ಹಲವಾರು ಪ್ರಶ್ನೆಗಳನ್ನು ನಮ್ಮೆದುರು ನಿರ್ಲಿಪ್ತ ಅನ್ನುವುದಕ್ಕಿಂತ ನಿರ್ದಯ ಮನೋಭಾವದಿಂದ ಇಡುತ್ತವೆ.
ಪ್ರಜಾಪ್ರಭುತ್ವದಲ್ಲಿ ಜನತೆಯ ಎದುರಲ್ಲೇ ನಡೆಯುತ್ತಿದೆ ಎಂಬಂತೆ ಕಾಣುವ ರಾಜಕಾರಣ ಜನತೆಯ ಪಾಲಿಗೆ ತನ್ನ ಧೂರ್ತ ಸತ್ಯಗಳ ಹಲವು ಬಾಗಿಲುಗಳನ್ನು ಮುಚ್ಚಿಯೇ ಇಟ್ಟಿರುತ್ತದೆ. ಜನ ಮಾತ್ರ ತನಗೆ ಕಾಣುತ್ತಿರುವ ಮಸುಕು ಮಸುಕು ಸಂಗತಿಗಳನ್ನೇ ಸತ್ಯ ಅಂದುಕೊಳ್ಳುತ್ತದೆ. ಅದೇ ಅದರ ವಿಭ್ರಮೆಯೂ ಆಗಿರುತ್ತದೆ. ಯಾರೂ ಘೋಷಿತ ನಿಲುವುಗಳನ್ನು ಸುಲಭವಾಗಿ ಬದಲಿಸಲಾರರು. ಬದಲಿಸಹೊರಟರೂ ಹಳೆಯದರ ಹಗ್ಗ ಕಾಲಿಗೆ ಸುತ್ತದೇ ಇರದು. ಡ್ರೈವರನನ್ನು ಡ್ರೈವರನೆಂದು ಕರೆಯಬಾರದು ಎಂದು ಹೊರಟವನೊಬ್ಬ ತಮಾಷೆಗೆ ಸಿಲುಕುವುದನ್ನು ಜೋಗಿ ಇಲ್ಲಿನ ಒಂದು ಕಥೆಯಲ್ಲಿ ಕಾಣಿಸುತ್ತಾರೆ. ಕಥೆಯಲ್ಲಿ ಡ್ರೈವರನಂತೂ ತನ್ನ ಧಣಿ ತನ್ನನ್ನು ಹೆಸರು ಹಿಡಿದು ಕರೆದುದಕ್ಕಿಂತ ಡ್ರೈವರ್ ಎಂದು ಕರೆದಾಗಲೇ ನಿರಾಳವಾಗುತ್ತಾನೆ.
ಸಾವು ಮತ್ತು ಅದರ ಗಡಿಭಾಗದ ಗೊಂದಲಗಳು ಜೋಗಿ ಕಥೆಯಲ್ಲಿ ಮತ್ತೆ ಮತ್ತೆ ಮರಳುವ ಮತ್ತೊಂದು ಪ್ರಧಾನ ಅಂಶ. ಇತರರ ಸಾವಿನ ಬಗ್ಗೆ ಯೋಚಿಸುವಾಗ ನಾವು ನಮ್ಮ ಸಾವಿನ ಭಯದ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಸತ್ತವನು ಅವನಾ, ನಾನಾ ಎಂಬ ಭ್ರಮೆಯಲ್ಲಿ, ಬದುಕಿರುತ್ತಲೂ ಸಾಯುತ್ತಿರುತ್ತೇವೆ. ಸಾವಿನ ಕಾರಣದ ಸಿಂಪಥಿಯಲ್ಲಿ ಹುಟ್ಟಿಕೊಳ್ಳಬಹುದಾದ “ಪುರಾಣ” ಎಂಥ ತಮಾಷೆಯದ್ದಾಗಿರಬಲ್ಲುದು ಎಂಬುದಕ್ಕೆ “ಹಾ! ಪ್ರಾಣಕಾಂತಾ!” ಕಥೆ ನಿದರ್ಶನವನ್ನು ಕೊಡುತ್ತದೆ.
ಕಥೆಯನ್ನು ಹೀಗೆಯೇ ಬರೆಯಬೇಕು ಎಂಬ ಹಂಗಿನರಮನೆಯ ಹೊರಗೆ ನಿಂತಿದ್ದಾನೆ ಕಥೆಗಾರ. ಸಹಜತೆಯೇ ಈ ಕಥೆಗಳಿಗೆ ಜೀವ ಕೊಟ್ಟಿದೆ. ಹಾಗಾಗಿಯೇ ಇಲ್ಲಿ ತೆರೆದುಕೊಂಡಿರುವ ಅವಕಾಶ ಕೂಡ ಕಾಲಾಂತರದ್ದು. ಯಾವತ್ತೂ ನಮ್ಮನ್ನು ಆಳುವ ಒಂದು ಬಗೆಯ ಕೈಮೀರಿದ ಸ್ಥಿತಿಯ ಬಗೆಗಿನ ಧ್ಯಾನದಲ್ಲಿ ಈ ಕಥೆಗಳು ನಡೆಯುತ್ತವೆ. ಈ ಅರ್ಥದಲ್ಲಿ ಸಂಕಲನದ ಮುಖಪುಟದಲ್ಲಿನ “ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!” ಎಂಬ ಮಾತಿಗೆ ಮಹತ್ವವಿದೆ.
ಇಂಥ ನಡಿಗೆಯ ಈ ಕಥೆಗಳು ಅನೇಕ ಸಲ ಜೀರ್ಣಿಸಕೊಳ್ಳಲಾರದ ತರ್ಕಗಳಲ್ಲೇ ಮುಗಿಯುವುದಿದೆ. ಅದು ಈ ಕಥೆಗಳ ಸಾಂಕೇತಿಕ ಸಂಧಾನವೊ, ದಾರಿ ತಪ್ಪಿಸಿಕೊಂಡಾಗಿನ ಅಸಹಾಯಕತೆಯೊ ಗೊತ್ತಿಲ್ಲ. ಆದರೆ ಈ ಕಥೆಗಳ ಯೋಗವೆಂದರೆ, ಅವೆರಡರಲ್ಲಿ ಯಾವುದೇ ಆಗಿದ್ದರೂ ಒಂದು ಅರ್ಥವನ್ನು ಆ ಮೂಲಕ ಹೊಳೆಯಿಸುವ ಕಣ್ಣು ಇಲ್ಲಿ ತೆರೆದುಕೊಳ್ಳುತ್ತದೆ. ಝೆನ್ ಕಥೆಗಳಲ್ಲಿ ಕಾಣಿಸುವಂಥ ಒಂದು ಮಿಂಚು ಇಲ್ಲಿ ಸ್ಲೋ ಮೋಷನ್ನಿನಲ್ಲಿ ಪ್ರತ್ಯಕ್ಷವಾಗುತ್ತಾ, ಆಯಿತು ಅಂದುಕೊಳ್ಳುವಾಗ ಇಲ್ಲವಾಗುತ್ತದೆ. ಹಾಗಾಗಿ, ಈ ಕಥೆಗಳ ಹೆಚ್ಚುಗಾರಿಕೆ ಇರುವುದೇ ಇವುಗಳ ಇದ್ದೂ ಇಲ್ಲದಂತಿರುವ ಶರೀರದಲ್ಲಿ; ಮನುಷ್ಯ ಸಮೂಹದಂತೆ ಕಾಣುವ ಆದರೆ ಅದರಾಚೆಗಿನ ಸ್ವಪ್ನಲೋಕದ ಸಂಚಾರದಲ್ಲಿ; ಹಾಗೂ ತಮ್ಮ ಕಣ್ಣುಗಳ ಮೂಲಕ ಮನುಷ್ಯಲೋಕದ ಸಂಚಾರವನ್ನು ನುಡಿಯಲು ನೆಲೆಯೊಂದನ್ನು ಕಟ್ಟಿಕೊಡುವುದರೆಡೆಗಿನ ಸಾಧ್ಯತೆಯಲ್ಲಿ.
ಅಂದಹಾಗೆ, ಮೊನ್ನೆ ಪಾಂಡಾನ ಹೆಂಡತಿಯ ಡಿವೋರ್ಸ್ ಅರ್ಜಿ ವಿಚಾರಣೆಯಿತ್ತು. ಆ ವೇಳೆ ಕೋರ್ಟಿಗೆ ಬಂದ ಪಾಂಡಾ, ಮೀಡಿಯಾದ ಮೈಕುಗಳ ಮುಂದೆ ಮಾತಾಡಿದ. “ಹೆಂಡತಿಯನ್ನು ಮನೇಲಿಟ್ಟುಕೊಳ್ಳೋಕ್ಕೆ ನನ್ನ ಅಭ್ಯಂತರವೇನಿಲ್ಲ. ಆದರೆ ಹೆಂಡತಿಯಾಗಿ ಅಲ್ಲ, ಮಗಳಾಗಿ” ಅನ್ನುತ್ತಿದ್ದ ಭೂಪ! ಜೋಗಿಯವರ ಕಥೆಗಳೊಳಗಿನ ವಿಲಕ್ಷಣರಲ್ಲೂ ಇಂಥ ಭಂಡರು ಸಿಗುವುದಿಲ್ಲ ಎಂಬುದೇ ನಾವು ಇವತ್ತು ಎದುರಿಸಬೇಕಾಗಿರುವ ಅನಿವಾರ್ಯ ಸವಾಲಾಗಿದೆ.
October 29, 2007 at 11:51 am
ಥ್ಯಾಂಕ್ಯೂ ವಿಜಿ.
ಈ ವಿಜಿ ಯಾರು ಅಂತ ತಿಳಿಯದೇ ಒದ್ದಾಡುತ್ತಿದ್ದೆ. ಇವತ್ತು ನಿಮ್ಮ ನನ್ನ ಗೆಳೆಯರೊಬ್ಬರು ವಿ. ಜಿ. ಅಂದರು. ಅರ್ಥವಾಯಿತು.
ಜೋಗಿ