“ಸೂರ್ಯಗಂಧೀ ಧರಣಿ”ಯ ಹಾಡು
ಆಧುನಿಕ ಕಾವ್ಯದಲ್ಲಿ ಭೂಮಿ ಮತ್ತು ಚರಿತ್ರೆ ಎರಡು ಮಹತ್ವಪೂರ್ಣವಾದ ಆಶಯಗಳು. ವಾಸ್ತವವಾಗಿ, ಇವು ಕಾವ್ಯದ ಮುಖ್ಯ ಸಂಕಥನಗಳೂ ಹೌದು. “ಸೂರ್ಯಗಂಧೀ ಧರಣಿ”ಯಲ್ಲಿ ಕೂಡ “ಭೂಮಿ” ಮತ್ತು “ಚರಿತ್ರೆ” ಪ್ರತೀಕಗಳಾಗಿವೆ. ಇಲ್ಲಿನ ಕವಿತೆಗಳ ಸಂಕೀರ್ಣತೆ ಯಾವ ರೀತಿಯದ್ದೆಂದರೆ, ಭೂಮಿಯ ಬಗೆಗಿನ ಚಿಂತನೆಗಳು ಚರಿತ್ರೆಯ ಗ್ರಹಿಕೆಗೆ ನೆರವಾಗುವುದರೊಂದಿಗೆ, ಹೆಣ್ಣಿನ ಖಾಸಗಿ ಅನುಭವವನ್ನು ಅಭಿವ್ಯಕ್ತಿಸುವ ರೂಪಕಗಳೂ ಆಗಿಬಿಡುತ್ತವೆ. “ಭೂಮಿ” ತತ್ವದ ಗ್ರಹಿಕೆಯ ಮೊದಲನೆಯ ವಿಧಾನ ನವೋದಯ ಮತ್ತು ನವ್ಯದ ಮಾದರಿಯಾದರೆ, ಎರಡನೆಯದು ನವ್ಯೋತ್ತರ ಮಹಿಳಾ ಸಂವೇದನೆಗೆ ಸಂಬಂಧಿಸಿದ್ದು. ಇಲ್ಲಿನ ಕವಿತೆಗಳಲ್ಲಿ ನವೋದಯ ಮತ್ತು ನವ್ಯದ ಮಾದರಿ ಎಂಬ ಸರಳವಾದ ವಿಭಜನೆ ಸಾಧ್ಯವಿಲ್ಲ. ಈ ಎರಡೂ ಮಾದರಿಗಳ ಸಂಯೋಜನೆ, ಹೊಸದೊಂದು ಚಿಂತನೆಯ ಹೊರಚಾಚು ಆಗುವುದರತ್ತ ತುಯ್ಯುತ್ತದೆ. ಹೇಗೆಂದರೆ ನವೋದಯದ ವೈಯಕ್ತಿಕ ಅನುಭವ, ನವ್ಯದ ಸಾಮಾಜಿಕ ಅನುಭವವಾಗುವುದರತ್ತ (ಕೆ ಎಸ್ ನ ಮತ್ತು ಅಡಿಗರ ಕವಿತೆಗಳಂತೆ) ವಾಲುತ್ತದೆ. ಆ ವಾಲುವಿಕೆ ಇದ್ದಕ್ಕಿದ್ದಂತೆ ಚಿಪ್ಪಿನೊಳಗೆ ತಲೆ ಎಳೆದುಕೊಂಡು ನಿಂತುಬಿಡುತ್ತದೆ. ಈ ತುಯ್ದಾಟ, “ಸೂರ್ಯಗಂಧೀ ಧರಣಿ”ಯ ಹೆಚ್ಚಿನ ಕವಿತೆಗಳ ಲಕ್ಷಣವಾಗುವುದಲ್ಲದೆ, ಚಂದ್ರಿಕಾಳ ಆಯ್ಕೆ ಮತ್ತು ನಿಲುವುಗಳ ಸೂಚಕವೂ ಆಗಿದೆ.
ಬಿ ಯು ಸುಮಾ